ADVERTISEMENT

Bihar Polls|ಪರ್ದಾ ಧರಿಸುವವರ ಗುರುತು ಪರಿಶೀಲನೆ:ಅಂಗನವಾಡಿ ಕಾರ್ಯಕರ್ತೆಯರ ನೆರವು

ಪಿಟಿಐ
Published 10 ಅಕ್ಟೋಬರ್ 2025, 14:08 IST
Last Updated 10 ಅಕ್ಟೋಬರ್ 2025, 14:08 IST
   

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆ ವೇಳೆ ಬುರ್ಖಾ ಅಥವಾ ಪರ್ದಾ ಧರಿಸಿ ಮತದಾನ ಕೇಂದ್ರಗಳಿಗೆ ಬರುವ ಮತದಾರರ ಗುರುತನ್ನು ‘ಗೌರವಯುತ’ ರೀತಿಯಲ್ಲಿ ಪರಿಶೀಲಿಸಲು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ.

ಬುರ್ಖಾಧಾರಿ ಮತದಾರರ ಗುರುತನ್ನು ಪರಿಶೀಲಿಸಲು ಬಿಹಾರದ ಎಲ್ಲಾ ಮತಗಟ್ಟೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಜರಿರುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಬಿಹಾರ ಚುನಾವಣೆಯ ವೇಳಾಪಟ್ಟಿ ಪ್ರಕಟಿಸುವ ಸಂದರ್ಭದಲ್ಲಿ ಹೇಳಿದ್ದರು.

ಬುರ್ಖಾ ಧರಿಸಿದ ಮಹಿಳೆಯರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಅವರು, ಮತಗಟ್ಟೆಗಳಲ್ಲಿ ಗುರುತಿನ ಪರಿಶೀಲನೆಯ ಬಗ್ಗೆ ಚುನಾವಣಾ ಆಯೋಗದ ಸ್ಪಷ್ಟ ಮಾರ್ಗಸೂಚಿಗಳಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುವುದು. ಮಹಿಳೆಯರ ಗೋಪ್ಯತೆಯನ್ನು ಖಾತರಿಪಡಿಸಲಾಗುವುದು. ಮಹಿಳಾ ಅಧಿಕಾರಿಗಳ ಸಮ್ಮುಖದಲ್ಲಿ ಗುರುತು ಪರಿಶೀಲನೆ ನಡೆಯಲಿದೆ ಎಂದಿದ್ದರು.

ADVERTISEMENT

90,712 ಅಂಗನವಾಡಿ ಕಾರ್ಯಕರ್ತೆಯರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗುವುದು ಎಂದು ಆಯೋಗ ತಿಳಿಸಿದೆ.

‘ಮತಗಟ್ಟೆಗಳಿಗೆ ಬುರ್ಖಾ ಧರಿಸಿ ಬರುವ ಮಹಿಳಾ ಮತದಾರರ ಚಹರೆಯನ್ನು ಅವರ ಮತದಾರರ ಚೀಟಿಯಲ್ಲಿನ ಭಾವಚಿತ್ರದ ಜತೆಗೆ ಸರಿಯಾಗಿ ಪರಿಶೀಲಿಸಬೇಕು’ ಎಂದು ಬಿಜೆಪಿ ಬಿಹಾರ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಜೈಸ್ವಾಲ್‌ ಈಚೆಗೆ ಒತ್ತಾಯಿಸಿದ್ದರು.

ಬಿಹಾರ ವಿಧಾನಸಭೆಯ 243 ಸ್ಥಾನಗಳಿಗೆ ಎರಡು ಹಂತಗಳಲ್ಲಿ (ನ.6 ಮತ್ತು 11) ಮತದಾನ ನಡೆಯಲಿದೆ. ಮತ ಎಣಿಕೆ ನವೆಂಬರ್‌ 14ರಂದು ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.