
ಔರಂಗಾಬಾದ್/ ಭಭುವಾ (ಬಿಹಾರ): ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ದಾಖಲೆಯ ಮತದಾನ ನಡೆದಿರುವುದು ‘ಜನರು ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ಅವರ ಸಾಧನೆಯಲ್ಲಿ ತಮ್ಮ ನಂಬಿಕೆ ಇಟ್ಟಿರುವುದಕ್ಕೆ ಪುರಾವೆಯಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪ್ರತಿಪಾದಿಸಿದರು.
ಔರಂಗಾಬಾದ್ ಮತ್ತು ಭಭುವಾದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡ ಅವರು, ಈ ಚುನಾವಣೆಯಲ್ಲಿ ಎನ್‌ಡಿಎ ತನ್ನ ಅತಿದೊಡ್ಡ ಗೆಲುವು ದಾಖಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಮೊದಲ ಹಂತದ ಮತದಾನದ ವೇಳೆ ಬಿಹಾರದ ಮತದಾರರು ಎಲ್ಲಾ ದಾಖಲೆಗಳನ್ನು ಮುರಿದರು. ಇಷ್ಟೊಂದು ಪ್ರಮಾಣದಲ್ಲಿ ಮತದಾನ ನಡೆದಿರುವುದು ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಕಂಡಿಲ್ಲ. ಇದರ ಹೆಚ್ಚಿನ ಶ್ರೇಯಸ್ಸು ತಾಯಂದಿರು ಮತ್ತು ಸಹೋದರಿಯರಿಗೆ ಸಲ್ಲುತ್ತದೆ. ಅವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡಿದರು. ಅವರೆಲ್ಲರೂ ನರೇಂದ್ರ-ನಿತೀಶ್ ಸಾಧನೆಯ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂಬುದು ಸ್ಪಷ್ಟವಾಗಿದೆ’ ಎಂದು ಹೇಳಿದರು.
ಬಿಹಾರದಲ್ಲಿ ಉತ್ತಮ ಆಡಳಿತವನ್ನು ಖಾತರಿಪಡಿಸುವ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿರಬೇಕೆಂದು ಬಯಸಿ ಜನರು ಮತ ಚಲಾಯಿಸಿದ್ದಾರೆ ಎಂದು ಪ್ರತಿಪಾದಿಸಿದರು.
‘ಭರವಸೆ ನೀಡಿದ್ದನ್ನೆಲ್ಲಾ ಮಾಡುವುದರಿಂದ ಜನರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಇಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದ್ದು, 500 ವರ್ಷಗಳ ಅನ್ಯಾಯ ಕೊನೆಗೊಂಡಿದೆ. ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಲಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದಿರುವವರಿಗೆ ಶಿಕ್ಷೆಯಾಗುತ್ತದೆ ಎಂದು ನಾನು ಬಿಹಾರದ ನೆಲದಲ್ಲಿ ಭರವಸೆ ನೀಡಿದ್ದೆ. ಆಪರೇಷನ್ ಸಿಂಧೂರದಲ್ಲಿ ಏನಾಯಿತು ಎಂಬುದು ನಿಮಗೆಲ್ಲರಿಗೂ ತಿಳಿದಿದೆ’ ಎಂದರು.
‘ಮತ ಕಳ್ಳತನ’ ಅರೋಪ ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸಿದ ಪ್ರಧಾನಿ, ‘ವಿರೋಧ ಪಕ್ಷವು ತನಗೆ ಸನ್ನಿಹಿತವಾಗಿರುವ ಸೋಲಿಗೆ ನೆಪಗಳನ್ನು ಹುಡುಕುವಲ್ಲಿ ಈಗಾಗಲೇ ನಿರತವಾಗಿದೆ. ಅವರು ಬಿಹಾರದಲ್ಲಿ ಏಕೆ ಸೋಲು ಎದುರಾಯಿತು ಎಂಬುದನ್ನು ಹೇಗೆ ವಿವರಿಸಬೇಕೆಂದು ಅಭ್ಯಾಸ ನಡೆಸುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.