ADVERTISEMENT

ಕೋವಿಡ್‌ ಮಾರ್ಗಸೂಚಿ ಅನುಸರಿಸಿ, ಪ್ರಜಾಪ್ರಭುತ್ವದ ಪರ್ವದಲ್ಲಿ ಭಾಗಿಯಾಗಿ: ಮೋದಿ

ಬಿಹಾರ ಚುನಾವಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಅಕ್ಟೋಬರ್ 2020, 3:33 IST
Last Updated 28 ಅಕ್ಟೋಬರ್ 2020, 3:33 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಬಿಹಾರದ 71 ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ಮತದಾನ ನಡೆಯುತ್ತಿದ್ದು, 'ಕೋವಿಡ್‌ –19 ಸಂಬಂಧಿಸಿದ ಎಲ್ಲ ಮಾರ್ಗಸೂಚಿಗಳನ್ನು ಅನುಸರಿಸಿ ಪ್ರಜಾಪ್ರಭುತ್ವದ ಪರ್ವದಲ್ಲಿ ಭಾಗಿಯಾಗಿ' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟಿಸಿದ್ದಾರೆ.

ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು ನಡೆಯುತ್ತಿದೆ. ಕೋವಿಡ್‌ಗೆ ಸಂಬಂಧಿತ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಹಾಗೂ ಪ್ರಜಾಪ್ರಭುತ್ವದ ಪರ್ವದಲ್ಲಿ ಭಾಗಿಯಾಗಿ. ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತ್ತು ಎರಡು ಗಜಗಳ ಅಂತರ ಕಾಯ್ದುಕೊಳ್ಳುವಂತೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.

ಆರ್‌ಜೆಡಿ ನೇತೃತ್ವದ ಮಹಾಮೈತ್ರಿಕೂಟದಲ್ಲಿ ಕಾಂಗ್ರೆಸ್‌ ಮತ್ತು ಎಡಪಕ್ಷಗಳು ಸ್ಪರ್ಧಿಸಿದ್ದು, 'ಈ ಬಾರಿ ನ್ಯಾಯ ಸಮ್ಮತವಾದ, ರೈತರ ಪರವಾದ, ಉದ್ಯೋಗ ಸ್ನೇಹಿಯಾದ ಮಹಾಮೈತ್ರಿಗೆ ಮಾತ್ರವೇ ಮತ ನೀಡಿ' ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಕೋರಿದ್ದಾರೆ.

ADVERTISEMENT

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಟ್ವೀಟ್‌ ಮಾಡಿದ್ದು, 'ಕೋವಿಡ್‌–19 ಸಾಂಕ್ರಾಮಿಕದ ನಡುವೆ ನಡೆಯುತ್ತಿರುವ ಮೊದಲ ಸಾರ್ವತ್ರಿಕ ಚುನಾವಣೆ ಇದಾಗಿದೆ. ಬಿಹಾರದ 71 ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಸಾಂಕ್ರಾಮಿಕ ಮಣಿಸಬೇಕಿದೆ ಹಾಗೂ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಬೇಕಿದೆ. ಸುರಕ್ಷಿತವಾಗಿರಿ, ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ...' ಎಂದಿದ್ದಾರೆ.

ರಾಜ್ಯದ ಒಟ್ಟು 71 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದ್ದು, 1,066 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಬುಧವಾರ ಬಿಹಾರದಲ್ಲಿ ಚುನಾವಣಾ ಪ್ರಚಾರಗಳಲ್ಲಿ ಭಾಗಿಯಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.