ADVERTISEMENT

ಸನಾತನ ಧರ್ಮ ಉತ್ತೇಜಿಸಲು ಕ್ರಮ: ಬಿಹಾರ ಸರ್ಕಾರದಿಂದ 38 ಸಂಚಾಲಕರ ನೇಮಕ

ಪಿಟಿಐ
Published 23 ನವೆಂಬರ್ 2025, 9:24 IST
Last Updated 23 ನವೆಂಬರ್ 2025, 9:24 IST
<div class="paragraphs"><p>ನಿತೀಶ್ ಕುಮಾರ್</p></div>

ನಿತೀಶ್ ಕುಮಾರ್

   

ಪಟ್ನಾ: ಸನಾತನ ಧರ್ಮವನ್ನು ಉತ್ತೇಜಿಸುವ ಕ್ರಮವಾಗಿ ರಾಜ್ಯದಾದ್ಯಂತ ಎಲ್ಲ 38 ಜಿಲ್ಲೆಗಳಲ್ಲಿ ಸಂಚಾಲಕರನ್ನು ನೇಮಕ ಮಾಡುವುದಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ತಿಳಿಸಿದೆ.

ನೇಮಕಗೊಳ್ಳುವ ಸಂಚಾಲಕರನ್ನು ನೋಂದಾಯಿತ ದೇವಾಲಯಗಳು ಮತ್ತು ಮಠಗಳ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯೊಂದಿಗೆ ಸನಾತನ ಧರ್ಮದ ಕುರಿತು ಪ್ರಚಾರ ಮಾಡಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

‘ರಾಜ್ಯದಾದ್ಯಂತ ಮೂವತ್ತೆಂಟು ಸಂಚಾಲಕರನ್ನು ನೇಮಕ ಮಾಡಲಾಗುತ್ತದೆ. ಆಯ್ಕೆಯಾದ ಸಂಚಾಲಕರು ತಮ್ಮ ಪ್ರದೇಶಗಳಲ್ಲಿನ ಎಲ್ಲಾ ನೋಂದಾಯಿತ ದೇವಾಲಯಗಳು ಮತ್ತು ಮಠಗಳ ಮುಖ್ಯ ಅರ್ಚಕರೊಂದಿಗೆ ಸಮನ್ವಯದಿಂದ ಕೆಲಸ ಮಾಡಲಿದ್ದಾರೆ’ ಎಂದು ಬಿಹಾರ ರಾಜ್ಯ ಧಾರ್ಮಿಕ ಟ್ರಸ್ಟ್ ಕೌನ್ಸಿಲ್ (ಬಿಎಸ್‌ಆರ್‌ಟಿಸಿ) ಅಧ್ಯಕ್ಷ ರಣಬೀರ್ ನಂದನ್ ಹೇಳಿದ್ದಾರೆ.

ಬಿಹಾರದಾದ್ಯಂತ ಮಠಗಳು ಸೇರಿದಂತೆ 2,499 ದೇವಾಲಯಗಳು ನೋಂದಣಿಯಾಗಿದ್ದು, ಪ್ರತಿ ಜಿಲ್ಲೆಯಲ್ಲಿ ಒಬ್ಬ ಸಂಚಾಲಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಶೀಘ್ರವೇ ಆರಂಭವಾಗಿದೆ ಎಂದು ನಂದನ್ ತಿಳಿಸಿದ್ದಾರೆ.

‘ಸಂಚಾಲಕರು ತಮ್ಮ ಜಿಲ್ಲೆಗಳಲ್ಲಿರುವ ಎಲ್ಲಾ ನೋಂದಾಯಿತ ದೇವಾಲಯಗಳು ಮತ್ತು ಮಠಗಳಲ್ಲಿ ಪ್ರತಿ ತಿಂಗಳು ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಕ್ರಮವಾಗಿ ‘ಸತ್ಯನಾರಾಯಣ ಪೂಜೆ’ ಮತ್ತು ‘ಭಗವತಿ ಪೂಜೆ’ ನಡೆಸುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಈ ಎರಡು ಪೂಜೆಗಳ ಮಹತ್ವದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.

‘ನಾವು ಧಾರ್ಮಿಕ ಕ್ಯಾಲೆಂಡರ್ ಅನ್ನು ಹೊರತೆರಲು ನಿರ್ಧರಿಸಿದ್ದೇವೆ. ಇದರಲ್ಲಿ ಸನಾತನ ಧರ್ಮದ ಎಲ್ಲಾ ಹಬ್ಬಗಳು, ಪೂಜೆಗಳು ಮತ್ತು ಇತರ ಧಾರ್ಮಿಕ ಚಟುವಟಿಕೆಗಳನ್ನು ಹೈಲೈಟ್ ಮಾಡಲಾಗುತ್ತದೆ. ಈ ಕ್ಯಾಲೆಂಡರ್‌ಗಳನ್ನು ನೋಂದಾಯಿತ ದೇವಾಲಯಗಳು ಮತ್ತು ಮಠಗಳ ಮೂಲಕ ರಾಜ್ಯದಾದ್ಯಂತ ವಿತರಿಸಲಾಗುತ್ತದೆ’ ಎಂದೂ ಅವರು ಹೇಳಿದ್ದಾರೆ.