ADVERTISEMENT

ಬಿಹಾರ: ಕಳ್ಳಭಟ್ಟಿ ಸೇವಿಸಿ 11 ಜನ ಸಾವು, 12 ಮಂದಿ ಗಂಭೀರ

ಪಿಟಿಐ
Published 6 ಆಗಸ್ಟ್ 2022, 2:51 IST
Last Updated 6 ಆಗಸ್ಟ್ 2022, 2:51 IST
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)   

ಪಟ್ನಾ: ಬಿಹಾರದ ಸರಣ್‌ ಜಿಲ್ಲೆಯಲ್ಲಿ ಕಳ್ಳಭಟ್ಟಿ ಸೇವಿಸಿ 11 ಮಂದಿ ಮೃತಪಟ್ಟಿದ್ದಾರೆ. 12 ಜನ ಗಂಭೀರವಾಗಿ ಅಸ್ವಸ್ಥಗೊಂಡಿದ್ದು, ಈ ಪೈಕಿ ಹೆಚ್ಚಿನವರು ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಶ್ ಮೀನಾ ಹಾಗೂ ಎಸ್‌ಪಿ ಸಂತೋಷ್ ಕುಮಾರ್ ಛಪ್ರಾದಲ್ಲಿ ಪತ್ರಿಕಾಗೋಷ್ಠಿ ಮೂಲಕ ಮಾಹಿತಿ ನೀಡಿದ್ದಾರೆ. ಕಳ್ಳಭಟ್ಟಿ ತಯಾರಿಕೆ ಆರೋಪದಲ್ಲಿ ಐವರನ್ನು ಬಂಧಿಸಲಾಗಿದೆ. ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿಯೊಬ್ಬರನ್ನು ಅಮಾನತು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಾಕರ್ ಪೊಲೀಸ್ ಠಾಣಾ ವ್ಯಾಪ್ತಿಯ ಫುಲ್‌ವರಿಯಾ ಪಂಚಾಯತ್ ವ್ಯಾಪ್ತಿಯಲ್ಲಿ ಜನರು ಅಸ್ವಸ್ಥರಾಗುತ್ತಿರುವ ಬಗ್ಗೆ ಗುರುವಾರ ಮಾಹಿತಿ ತಿಳಿದುಬಂದಿತ್ತು. ಅಬಕಾರಿ ಅಧಿಕಾರಿಗಳನ್ನು ಮತ್ತು ವೈದ್ಯರನ್ನೊಳಗೊಂಡ ಪೊಲೀಸರ ತಂಡವನ್ನು ಸ್ಥಳಕ್ಕೆ ಕಳುಹಿಸಿಕೊಡಲಾಗಿತ್ತು. ಅಸ್ವಸ್ಥಗೊಂಡವರನ್ನು ಸಮೀಪದ ಸಾದರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರವಾಗಿ ಅಸ್ವಸ್ಥಗೊಂಡವರನ್ನು ಬಳಿಕ ಪಟ್ನಾದ ಪಿಎಂಸಿಎಚ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಮ್ಯಾಜಿಸ್ಟ್ರೇಟ್ ಹಾಗೂ ಎಸ್‌ಪಿ ತಿಳಿಸಿದ್ದಾರೆ.

‘ಶ್ರಾವಣ ಮಾಸದ ಹಬ್ಬವೊಂದರಲ್ಲಿ ಮದ್ಯಪಾನ ಮಾಡುವ ಸಂಪ್ರದಾಯ ಗ್ರಾಮಸ್ಥರಲ್ಲಿ ಇದೆ ಎಂಬ ಬಗ್ಗೆ ಮಾಹಿತಿ ದೊರೆತಿದೆ. ಆಗಸ್ಟ್‌ 3ರಂದು ಹಬ್ಬ ನಡೆದಿತ್ತು ಮತ್ತು ಸ್ಥಳೀಯರು ಮದ್ಯ ಸೇವಿಸಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.