ADVERTISEMENT

 ಹುತಾತ್ಮ ಯೋಧರ ಕುಟುಂಬಕ್ಕೆ ಬಿಹಾರದ ಕೈದಿಗಳಿಂದ ₹50,000 ಧನ ಸಹಾಯ 

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2019, 5:56 IST
Last Updated 19 ಫೆಬ್ರುವರಿ 2019, 5:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಟ್ನಾ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಬಿಹಾರ್ ಗೋಪಾಲ್‍ಗಂಜ್ ಸಬ್ ಡಿವಿಷನಲ್ ಜೈಲಿನ ಕೈದಿಗಳು ಮತ್ತು ಸಿಬ್ಬಂದಿಗಳು ₹50,000 ಧನ ಸಹಾಯ ನೀಡಿದ್ದಾರೆ.

ಆರ್ಮಿ ರಿಲೀಫ್ ಫಂಡ್ (ಎಆರ್‌ಎಫ್) ಗೆ ಡಿ.ಡಿ ಮೂಲಕ ಸೋಮವಾರ ಈ ಹಣ ಕಳಿಸಲಾಗಿದೆ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ. ಈ ಜೈಲಿನಲ್ಲಿ 30 ಮಹಿಳಾ ಕೈದಿಗಳು ಸೇರಿದಂತೆ ಒಟ್ಟು 750 ಕೈದಿಗಳಿದ್ದಾರೆ.

ಪುಲ್ವಾಮ ದಾಳಿ ನಂತರದ ಬೆಳವಣಿಗೆಯನ್ನು ಗಮನಿಸುತ್ತಿದ್ದ ಕೈದಿಗಳು ಹುತಾತ್ಮ ಯೋಧರ ಕುಟುಂಬಕ್ಕೆ ನೆರವಾಗುವುದಾಗಿ ಹೇಳಿದ್ದರು.ಅದೇ ವೇಳೆ ಗಡಿಭಾಗದಲ್ಲಿ ಯುದ್ಧ ನಡೆದರೆ ತಾವು ಕೂಡಾ ದೇಶಕ್ಕಾಗಿ ಹೋರಾಡುತ್ತೇವೆ ಎಂದು 250 ಕೈದಿಗಳ ಸಹಿಯಿರುವ ಪತ್ರವೊಂದನ್ನು ಕೈದಿಗಳು ಪ್ರಧಾನಿ ಮೋದಿಯವರಿಗೆ ಕಳುಹಿಸಿಕೊಟ್ಟಿದ್ದಾರೆ.

ADVERTISEMENT

ನಾವು ಈ ಯುದ್ಧದಲ್ಲಿ ಸತ್ತರೆ ಹುತಾತ್ಮರಾಗುವ ಭಾಗ್ಯ ನಮಗೆ ದಕ್ಕುತ್ತದೆ. ಒಂದು ವೇಳೆ ಬದುಕುಳಿದರೆ ನಾವು ಈ ಜೈಲಿಗೆ ವಾಪಸ್ ಆಗಿ ಇಲ್ಲಿ ಯಾರಿಗೂ ತೊಂದರೆ ಕೊಡದೆ ಇದ್ದು ಬಿಡುತ್ತೇವೆ ಎಂದು ಪತ್ರದಲ್ಲಿ ಬರೆದಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.