ADVERTISEMENT

ಬಿಹಾರ CM ನಿತೀಶ್ ಆಯೋಜಿಸಿರುವ ಇಫ್ತಾರ್ ಕೂಟದಲ್ಲಿ ಭಾಗಿಯಾಗಲ್ಲ: ಮುಸ್ಲಿಂ ಸಂಘಟನೆ

ಪಿಟಿಐ
Published 23 ಮಾರ್ಚ್ 2025, 2:33 IST
Last Updated 23 ಮಾರ್ಚ್ 2025, 2:33 IST
<div class="paragraphs"><p>ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್</p></div>

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

   

ಪಿಟಿಐ

ಪಟ್ನಾ: ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 'ಇಫ್ತಾರ್‌ ಕೂಟ'ದಲ್ಲಿ ಪಾಲ್ಗೊಳ್ಳುವಂತೆ ನೀಡಿರುವ ಆಹ್ವಾನವನ್ನು ತಿರಸ್ಕರಿಸಿರುವುದಾಗಿ ಬಿಹಾರದ ಪ್ರಮುಖ ಮುಸ್ಲಿಂ ಸಂಘಟನೆಯೊಂದು ಶನಿವಾರ ಪ್ರಕಟಿಸಿದೆ.

ADVERTISEMENT

ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ 'ವಕ್ಫ್ ತಿದ್ದುಪಡಿ ಮಸೂದೆ'ಗೆ ನಿತೀಶ್‌ ಬೆಂಬಲ ಸೂಚಿಸಿರುವುದಕ್ಕೆ ಪ್ರತಿಭಟನಾರ್ಥವಾಗಿ ಈ ತೀರ್ಮಾನ ಮಾಡಿರುವುದಾಗಿ ಸಂಘಟನೆ ತಿಳಿಸಿದೆ.

ಬಿಹಾರ, ಜಾರ್ಖಂಡ್‌ ಮತ್ತು ಒಡಿಶಾದಾದ್ಯಂತ ಬೆಂಬಲಿಗರನ್ನು ಹೊಂದಿರುವಾಗಿ ಹೇಳಿಕೊಂಡಿರುವ 'ಇಮಾರತ್‌ ಷರಿಯಾ' ಸಂಘಟನೆ, ಮುಖ್ಯಮಂತ್ರಿಗಳ ನಿವಾಸದಲ್ಲಿ ಭಾನುವಾರ (ಇಂದು) ಆಯೋಜನೆಗೊಂಡಿರುವ ಇಫ್ತಾರ್‌ ಕೂಟದ ಆಹ್ವಾನಕ್ಕೆ ಸಂಬಂಧಿಸಿದಂತೆ ನೀಡಿರುವ ಪ್ರತಿಕ್ರಿಯೆಯ ಪ್ರತಿಯನ್ನು ಹಂಚಿಕೊಂಡಿದೆ.

'ಮಾರ್ಚ್‌ 23ರಂದು ಸರ್ಕಾರಿ ಇಫ್ತಾರ್‌ನಲ್ಲಿ ಪಾಲ್ಗೊಳ್ಳದಿರಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಸ್ಲಿಮರ ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವ ವಕ್ಫ್‌ ಮಸೂದೆಗೆ ನೀಡುತ್ತಿರುವ ಬೆಂಬಲವನ್ನು ಗಮನಲ್ಲಿಟ್ಟುಕೊಂಡು ಈ ತೀರ್ಮಾನ ಮಾಡಲಾಗಿದೆ' ಎಂದು ಉಲ್ಲೇಖಿಸಿದೆ.

'ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಜಾತ್ಯತೀತ ಆಡಳಿತ ನಡೆಸುವ ಭರವಸೆಯೊಂದಿಗೆ ನೀವು ಅಧಿಕಾರಕ್ಕೇದ್ದೀರಿ. ಆದರೆ, ಬಿಜೆಪಿ ಜೊತೆಗಿನ ನಿಮ್ಮ ಮೈತ್ರಿ ಹಾಗೂ ಸಂವಿಧಾನಬಾಹಿರ, ತರ್ಕಬದ್ಧವಲ್ಲದ ಶಾಸನಕ್ಕೆ ಬೆಂಬಲ ನೀಡುತ್ತಿರುವುದು, ನಿಮ್ಮ ಘೋಷಿತ ಬದ್ಧತೆಗೆ ವಿರುದ್ಧವಾಗಿದೆ' ಎಂದು ಟೀಕಿಸಿದೆ.

ಮುಖ್ಯಮಂತ್ರಿಗಳ ಇಫ್ತಾರ್‌ ಕೂಟವನ್ನು 'ಸಾಂಕೇತಿಕವಷ್ಟೇ' ಎಂದಿರುವ ಇಮಾರತ್‌ ಷರಿಯಾ, 'ಮುಸ್ಲೀಮರ ಬಗ್ಗೆ ಕಾಳಜಿಯಿಲ್ಲದ ನಿಮ್ಮ ಸರ್ಕಾರದ ಬೇಜವಾಬ್ದಾರಿ ಧೋರಣೆಯು ಇಂತಹ ಔಪಚಾರಿಕೆ ಸಭೆಗಳನ್ನು ಅರ್ಥಹೀನಗೊಳಿಸುತ್ತದೆ' ಎಂದು ಕುಟುಕಿದೆ.

ಸಂಘಟನೆಯ ಈ ನಿರ್ಧಾರದ ಬಗ್ಗೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಾಗಲೀ, ಅವರ ಪಕ್ಷ ಜೆಡಿ(ಯು) ಆಗಲೀ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.