ADVERTISEMENT

ಪ್ರಧಾನಿ ನರೇಂದ್ರ ಮೋದಿಗೆ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಸವಾಲು

ಕೇಂದ್ರದಲ್ಲಿ 2024ರಲ್ಲೂ ಅಧಿಕಾರಕ್ಕೆ ಬರುತ್ತಾರೆಯೇ: ಬಿಹಾರ ಸಿ.ಎಂ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 22:00 IST
Last Updated 10 ಆಗಸ್ಟ್ 2022, 22:00 IST
ಪಟ್ನಾದಲ್ಲಿ ಬುಧವಾರ ಬಿಹಾರದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿನಂದಿಸಿದರು      –ಪಿಟಿಐ ಚಿತ್ರ
ಪಟ್ನಾದಲ್ಲಿ ಬುಧವಾರ ಬಿಹಾರದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿನಂದಿಸಿದರು      –ಪಿಟಿಐ ಚಿತ್ರ   

ಪಟ್ನಾ: ಬಿಜೆಪಿ ಮೈತ್ರಿಯನ್ನು ತೊರೆದು ವಿರೋಧ ಪಕ್ಷಗಳ ಮಹಾಮೈತ್ರಿಕೂಟದ ಜತೆಗೆ ಸರ್ಕಾರ ರಚಿಸಿದ ಬೆನ್ನಲ್ಲೇ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಹಾಕಿದ್ದಾರೆ. ‘2024ರಲ್ಲಿ ಅವರು ಅಧಿಕಾರಕ್ಕೆ ಬರುತ್ತಾರೆಯೇ‘ ಎಂದು ನಿತೀಶ್ ಪ್ರಶ್ನಿಸಿದ್ದಾರೆ.

ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿದ್ದಾರೆ. ‘ನಮ್ಮ ಭವಿಷ್ಯ ಏನು ಎಂಬುದು ಈಗಿನ ಪ್ರಶ್ನೆಯಲ್ಲ. ಬದಲಿಗೆ 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದವರು, 2024ರಲ್ಲೂ ಅಧಿಕಾರದಲ್ಲೇ ಇರುತ್ತಾರೆಯೇ ಎಂಬುದು ಈಗ ಕೇಳಬೇಕಾಗಿರುವ ಪ್ರಶ್ನೆ. ಅವರು ತಲೆಕೆಡಿಸಿಕೊಳ್ಳಬೇಕಿರುವುದು 2024ರ ಬಗ್ಗೆ, ನನ್ನ ಕುರಿತು ಅಲ್ಲ’ ಎಂದು ನಿತೀಶ್ ಹೇಳಿದ್ದಾರೆ.

‘ನಾನು ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ’ ಎಂದು ನಿತೀಶ್‌ ಸ್ಪಷ್ಟಪಡಿಸಿದ್ದಾರೆ. ‘ಆದರೆ, ಬಿಜೆಪಿ ವಿರುದ್ಧ ಹೋರಾಡುತ್ತಿರುವ ಎಲ್ಲಾ ವಿರೋಧ ಪಕ್ಷಗಳನ್ನು ನಾನು ಒಗ್ಗೂಡಿಸುತ್ತೇನೆ’ ಎಂದು ಅವರು ಹೇಳಿದ್ದಾರೆ. ಬಿಜೆಪಿಯ ಸಖ್ಯವನ್ನು ತೊರೆದು, ಬಿಹಾರದ ವಿರೋಧ ಪಕ್ಷಗಳ ಜತೆಗೆ ಸರ್ಕಾರ ರಚಿಸಿದ ನಿತೀಶ್ ಅವರ ನಡೆಯನ್ನು ದೇಶದ ಬಹುತೇಕ ಪ್ರತಿ‍ಪಕ್ಷಗಳು ಸ್ವಾಗತಿಸಿವೆ. ದೇಶದ ರಾಜಕಾರಣದಲ್ಲಿ ಇದೊಂದು ಮಹತ್ವದ ಬದಲಾವಣೆ ಎಂದು ವಿರೋಧ ಪಕ್ಷಗಳ ಹಲವು ನಾಯಕರು ಹೇಳಿದ್ದಾರೆ.

ADVERTISEMENT

ಬಿಜೆಪಿಯಲ್ಲಿ ಈಗಿನ ಸ್ಥಿತಿ ಸರಿಯಾಗಿಲ್ಲ ಎಂದು ನಿತೀಶ್ ಆರೋಪಿಸಿದ್ದಾರೆ. ‘ವಾಜಪೇಯಿ–ಅಡ್ವಾಣಿ ಅವರ ಕಾಲದ ಬಿಜೆಪಿಯ ದಿನಗಳು ಉತ್ತಮವಾಗಿದ್ದವು. ಪ್ರಧಾನಿಯಾಗಿದ್ದ ವಾಜಪೇಯಿ ಅವರಿಂದ ನಮಗೆ ಮಾರ್ಗದರ್ಶನ ದೊರೆಯುತ್ತಿತ್ತು. ಆದರೆ ಬಿಜೆಪಿಯ ಈಗಿನ ದಿನಗಳು ಅದಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿವೆ’ ಎಂದು ಅವರು ಹೇಳಿದ್ದಾರೆ.

‘2020ರ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ಮುಖ್ಯಮಂತ್ರಿ ಯಾಗಿ ಮುಂದುವರಿಯಲು ನಾನು ಬಯಸಿರಲಿಲ್ಲ. ಆದರೆ, ಬಿಜೆಪಿಯ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿಯಾದೆ. ಅದಕ್ಕಾಗಿ ಪಶ್ಚಾತ್ತಾಪ ಪಡುತ್ತೇನೆ. ಆದರೆ, ನಿನ್ನೆ ಬಿಜೆಪಿಯನ್ನು ದೂರ ತಳ್ಳಿದ ನಂತರ ಆರಾಮವಾಗಿ ಇದ್ದೇನೆ’ ಎಂದು ಅವರು ಹೇಳಿದ್ದಾರೆ.

ಎಂಟನೇ ಬಾರಿ ಮುಖ್ಯಮಂತ್ರಿ

ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್‌ ಕುಮಾರ್ ಅವರು ಬುಧವಾರ ಎಂಟನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಒಟ್ಟು ಏಳು ಪಕ್ಷಗಳ ಮಹಾಮೈತ್ರಿಕೂಟದ ಈ ಸರ್ಕಾರದಲ್ಲಿ ಸಚಿವ ಸಂಪುಟದ ಸದಸ್ಯರ ಸಂಖ್ಯೆ 35ರಷ್ಟು ಇರಲಿದೆ ಎನ್ನಲಾಗಿದೆ. ಮೈತ್ರಿಕೂಟದ ಯಾವ ಪಕ್ಷಕ್ಕೆ ಎಷ್ಟು ಸಚಿವ ಸ್ಥಾನ ಸಿಗಲಿದೆ ಎಂಬುದು ಇನ್ನೂ ಅಂತಿಮವಾಗಿಲ್ಲ. ಆದರೆ, ಪ್ರಮುಖ ಖಾತೆಗಳನ್ನು ಜೆಡಿಯು ಉಳಿಸಿಕೊಳ್ಳಲಿದೆ ಮತ್ತು ಮೈತ್ರಿಕೂಟದಲ್ಲೇ ಅತ್ಯಂತ ದೊಡ್ಡ ಪಕ್ಷವಾಗಿರುವ ಆರ್‌ಜೆಡಿಗೆ ಹೆಚ್ಚಿನ ಸಚಿವ ಸ್ಥಾನಗಳು ಸಿಗಲಿವೆ ಎಂದು ಮೂಲಗಳು ಹೇಳಿವೆ. ಕಾಂಗ್ರೆಸ್‌ಗೂ ನಾಲ್ಕು ಖಾತೆಗಳು ದೊರೆಯಲಿದೆ ಎನ್ನಲಾಗಿದೆ.

243 ಸ್ಥಾನಗಳಿರುವ ಬಿಹಾರ ವಿಧಾನಸಭೆಯಲ್ಲಿ ಈಗ ಒಂದು ಸ್ಥಾನ ತೆರವಾಗಿದೆ. ಹೀಗಾಗಿ ವಿಧಾನಸಭೆಯ ಗಾತ್ರ 242ಕ್ಕೆ ಕುಸಿದಿದೆ. ಸರ್ಕಾರ ರಚನೆಗೆ 122 ಶಾಸಕರ ಬೆಂಬಲ ಬೇಕಿದೆ. ಆದರೆ ಜೆಡಿಯು ನೇತೃತ್ವದ ಮಹಾಮೈತ್ರಿಕೂಟದ ಒಟ್ಟು ಶಾಸಕರ ಸಂಖ್ಯೆ 164ರಷ್ಟಿದೆ.

‘ಇ.ಡಿ, ಸಿಬಿಐಗೆ ಹೆದರುವುದಿಲ್ಲ’

‘ನಾವು ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಸಿಬಿಐಗೆ ಹೆದರುವುದಿಲ್ಲ’ ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಲಲನ್ ಸಿಂಗ್ ಹೇಳಿದ್ದಾರೆ.

‘ವಿರೋಧ ಪಕ್ಷಗಳ ವಿರುದ್ಧ ಬಿಜೆಪಿಯು, ಕೇಂದ್ರದ ತನಿಖಾ ಸಂಸ್ಥೆಗಳನ್ನು ಛೂ ಬಿಡುತ್ತದೆ. ಆದರೆ, ‘ದೊಡ್ಡ ಕಂಪನಿ’ಗಳನ್ನು ನಡೆಸುತ್ತಿರುವವರು ಅಂತಹ ಸಂಸ್ಥೆಗಳಿಗೆ ಹೆದರಬೇಕು. ಸಂಸದರಾಗಿ, ಶಾಸಕರಾಗಿ ವೇತನ ಪಡೆಯುವವರು ಹಾಗೂ ನ್ಯಾಯಬದ್ಧ ವ್ಯವಹಾರದಿಂದ ಆದಾಯ ಪಡೆಯುವವರು ಆ ಸಂಸ್ಥೆಗಳಿಗೆ ಹೆದರಬೇಕಿಲ್ಲ’ ಎಂದು ಅವರು ಹೇಳಿದ್ದಾರೆ. ‘ಅರುಣಾಚಲ ಪ್ರದೇಶದಲ್ಲಿ ನಾವು ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ್ದೆವು. ಆದರೆ, ಬಿಜೆಪಿ ನಮ್ಮ ಶಾಸಕರನ್ನೆಲ್ಲಾ ತನ್ನತ್ತ ಸೆಳೆದುಕೊಂಡಿತು. ಅವರಿಂದ ನಾವು ಮೈತ್ರಿಧರ್ಮದ ಪಾಠ ಕೇಳಬೇಕಾಗಿಲ್ಲ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.