ನರೇಂದ್ರ ಮೋದಿ
(ಪಿಟಿಐ ಚಿತ್ರ)
ಪಟ್ನಾ: ವಿಧಾನಸಭೆ ಚುನಾವಣಾ ಹೊಸ್ತಿಲಲ್ಲಿರುವ ಬಿಹಾರಕ್ಕೆ ಇಂದು (ಶುಕ್ರವಾರ) ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ಬಳಿಕ ಸಿವಾನ್‌ನಲ್ಲಿ ನಡೆದ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಹಾಗೂ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಬಿಹಾರದಲ್ಲಿ ಹೂಡಿಕೆ ಮತ್ತು ಅಭಿವೃದ್ಧಿಯನ್ನು ಆರ್‌ಜೆಡಿ ಮತ್ತು ಕಾಂಗ್ರೆಸ್ ವಿರೋಧಿಸುತ್ತಲೇ ಬಂದಿದೆ ಎಂದು ಅವರು ಆರೋಪಿಸಿದ್ದಾರೆ.
'ದೇಶದಲ್ಲಿ ಬಡತನಕ್ಕೆ ಕಾಂಗ್ರೆಸ್ ಆಡಳಿತ ಕಾರಣವಾಗಿದೆ. ಬಿಹಾರದಲ್ಲಿ ಕಾರ್ಮಿಕರ ವಲಸೆಗೂ ಕಾಂಗ್ರೆಸ್-ಆರ್‌ಜೆಡಿ ಕಾರಣವಾಗಿದೆ. ಕಾಂಗ್ರೆಸ್ ನಾಯಕರ ಕುಟುಂಬಗಳು ಶ್ರೀಮಂತವಾದರೆ ಜನರು ಬಡವರಾಗಿಯೇ ಉಳಿದಿದ್ದಾರೆ' ಎಂದು ಹೇಳಿದ್ದಾರೆ.
'ಬಿಹಾರದಲ್ಲಿ 'ಜಂಗಲ್ ರಾಜ್' ಮಾಡಿದ ಪಕ್ಷಗಳು ಮತ್ತೆ ಅಧಿಕಾರ ಹಿಡಿಯಲು ಯತ್ನಿಸುತ್ತಿವೆ' ಎಂದು ಅವರು ಟೀಕಿಸಿದ್ದಾರೆ.
'ಬಿಹಾರದಲ್ಲಿ ಎನ್‌ಡಿಎ ಸರ್ಕಾರವು 55,000 ಕಿ.ಮೀ ಗ್ರಾಮೀಣ ರಸ್ತೆಗಳನ್ನು ನಿರ್ಮಿಸಿದ್ದು, 1.5 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಮತ್ತು 26 ಕೋಟಿ ಮನೆಗಳಿಗೆ ನೀರಿನ ಸರಬರಾಜು ಮಾಡಿದೆ' ಎಂದು ಅವರು ಉಲ್ಲೇಖಿಸಿದ್ದಾರೆ.
ಬಿಹಾರದ ಸಿವಾನ್ ಜಿಲ್ಲೆಯಲ್ಲಿ ₹5,900 ಕೋಟಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.
'ಸಬ್‌ಕಾ ಸಾಥ್ ವಿಕಾಸ್' ಮೇಲೆ ನಮಗೆ ನಂಬಿಕೆಯಿದೆ. ಆದರೆ ಆರ್‌ಜೆಡಿ 'ಪರಿವಾರ್ ಕಾ ವಿಕಾಸ್'ನಲ್ಲಿ ನಂಬಿಕೆ ಇರಿಸಿದೆ ಎಂದು ಅವರು ಟೀಕಿಸಿದ್ದಾರೆ.
ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಆರ್‌ಜೆಡಿ ಅವಮಾನಿಸಿದ್ದು, ದಲಿತ ನಾಯಕನಿಗೆ ಆಗಿರುವ ಅವಮಾನವನ್ನು ಬಿಹಾರದ ಜನರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.