ADVERTISEMENT

ಬಿಹಾರ ಚುನಾವಣೆ: ಇಂದು ಮೂರು ರ್‍ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ

ಏಜೆನ್ಸೀಸ್
Published 23 ಅಕ್ಟೋಬರ್ 2020, 2:29 IST
Last Updated 23 ಅಕ್ಟೋಬರ್ 2020, 2:29 IST
ನರೇಂದ್ರ ಮೋದಿ (ಸಂಗ್ರಹ ಚಿತ್ರ)
ನರೇಂದ್ರ ಮೋದಿ (ಸಂಗ್ರಹ ಚಿತ್ರ)   

ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯು ಇಂದು (ಶುಕ್ರವಾರ) ಆಯೋಜಿಸಿರುವ ಮೂರು ಚುನಾವಣಾ ಪ್ರಚಾರ ರ್‍ಯಾಲಿಗಳನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ.

ಸಸಾರಾಮ್, ಗಯಾ ಮತ್ತು ಭಗಲ್ಪುರಗಳಲ್ಲಿ ರ್‍ಯಾಲಿಗಳು ನಡೆಯಲಿವೆ. ಒಟ್ಟಾರೆಯಾಗಿ ಬಿಹಾರದಲ್ಲಿ ಮೋದಿಯವರು 12 ಚುನಾವಣಾ ಪ್ರಚಾರ ಸಭೆಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿಹಾರದಲ್ಲಿ ಮೋದಿಯವರು ಪಾಲ್ಗೊಳ್ಳಲಿರುವ ಚುನಾವಣಾ ಪ್ರಚಾರ ಸಭೆಗಳ ಬಗ್ಗೆ ಬಿಜೆಪಿಯ ಬಿಹಾರ ಉಸ್ತುವಾರಿ ದೇವೇಂದ್ರ ಫಡಣವೀಸ್ ಈ ಹಿಂದೆಯೇ ಮಾಹಿತಿ ನೀಡಿದ್ದಾರೆ. ಆ ಪೈಕಿ ಮೊದಲ ಮೂರು ರ್‍ಯಾಲಿಗಳು ಇಂದು ನಡೆಯಲಿವೆ. ಅಕ್ಟೋಬರ್ 28ರಂದು ದರ್ಭಾಂಗ, ಮುಜಾಫರ್‌ಪುರ ಹಾಗೂ ಪಟ್ನಾದಲ್ಲಿ ನಡೆಯುವ ರ್‍ಯಾಲಿಗಳನ್ನುದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ನವೆಂಬರ್ 3ರಂದು ಛಪ್ರಾ, ಪೂರ್ವ ಚಂಪರಣ್, ಸಮಷ್ಠಿಪುರ, ಪಶ್ಚಿಮ ಚಂಪರಣ್, ಸಹಸ್ರ ಹಾಗೂ ಅರಾರಿಯಾಗಳಲ್ಲಿ ರ್‍ಯಾಲಿಗಳು ನಡೆಯಲಿವೆ.

ADVERTISEMENT

ಪ್ರಧಾನಿ ಮೋದಿ ಮೇಲೆ ಜನತೆ ಇಟ್ಟಿರುವ ನಂಬಿಕೆಯು ಬಿಜೆಪಿಗೆ ಮಾತ್ರವಲ್ಲದೆ ಮಿತ್ರ ಪಕ್ಷಗಳಿಗೂ ನೆರವಾಗಲಿದೆ ಎಂದು ಫಡಣವೀಸ್ ಹೇಳಿದ್ದಾರೆ.

ಜನರಲ್ಲಿ ಉತ್ಸಾಹ ಕಂಡು ಬರುತ್ತಿದೆ. ಬಿಹಾರದಲ್ಲಿ ನಾವು ಎಲ್ಲಿಗೇ ಹೋದರೂ ಜನರ ಬಾಯಲ್ಲಿ ಮೋದಿ ಹೆಸರು ಕೇಳಿಬರುತ್ತಿದೆ. ದೇಶದ ಜನತೆ ಮೋದಿಯವರ ಮೇಲೆ ನಂಬಿಕೆ ಇರಿಸಿದ್ದಾರೆ. ಇದರಿಂದ ನಮಗೆ ಮಾತ್ರವಲ್ಲದೆ ಮಿತ್ರಪಕ್ಷಗಳಿಗೂ ಪ್ರಯೋಜನವಾಗಲಿದೆ ಎಂದು ಫಡಣವೀಸ್ ಹೇಳಿದ್ದಾರೆ.

243 ಸದಸ್ಯಬಲದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಯು ಕ್ರಮವಾಗಿ 121 ಮತ್ತು 122 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿವೆ.

ಕೇಂದ್ರದಲ್ಲಿ ಎನ್‌ಡಿಎ ಅಂಗವಾಗಿರುವ ಎಲ್‌ಜೆಪಿ ಬಿಹಾರದಲ್ಲಿ ಜೆಡಿಯು ಜತೆಗಿನ ಮೈತ್ರಿ ವಿರೋಧಿಸಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದು, 143 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ನಿತೀಶ್ ಕುಮಾರ್ ಅವರು ಮತ್ತೆ ಬಿಹಾರದ ಮುಖ್ಯಮಂತ್ರಿಯಾದರೆ ಎನ್‌ಡಿಎ ಮೈತ್ರಿಕೂಟ ತೊರೆಯುವುದಾಗಿ ಎಲ್‌ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಇತ್ತೀಚೆಗೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.