ADVERTISEMENT

Bihar Polls | ಚೌಧರಿ ಶೈಕ್ಷಣಿಕ ಅರ್ಹತೆ: ವಿವಾದ

ಪಿಟಿಐ
Published 17 ಅಕ್ಟೋಬರ್ 2025, 14:42 IST
Last Updated 17 ಅಕ್ಟೋಬರ್ 2025, 14:42 IST
ಸಾಮ್ರಾಟ್‌ ಚೌಧರಿ
ಸಾಮ್ರಾಟ್‌ ಚೌಧರಿ   

ಪಟ್ನಾ: ಬಿಹಾರದ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಸಾಮ್ರಾಟ್‌ ಚೌಧರಿ ಅವರ ಶೈಕ್ಷಣಿಕ ಅರ್ಹತೆ ಕುರಿತು ವಿವಾದ ಆರಂಭವಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಬಗ್ಗೆ ಜನ ಸುರಾಜ್‌ ಪಕ್ಷದ ಪ್ರಶಾಂತ್‌ ಕಿಶೋರ್‌ ಹಲವು ಬಾರಿ ಹಲವು ಆರೋಪಗಳನ್ನು ಮಾಡಿದ್ದಾರೆ.

ತಾರಾಪುರ ವಿಧಾನಸಭಾ ಕ್ಷೇತ್ರದಿಂದ ಚೌಧರಿ ಅವರು ಸ್ಪರ್ಧಿಸುತ್ತಾರೆ. ನಾಮಪತ್ರದ ಜೊತೆ 23 ಪುಟಗಳ ಅಫಿಡೆವಿಟ್‌ ಅನ್ನೂ ಸಲ್ಲಿಸಿದ್ದಾರೆ. ಇದರಲ್ಲಿ ಚೌಧರಿ ಅವರ ಹುಟ್ಟಿದ ದಿನಾಂಕ ಮತ್ತು ಶೈಕ್ಷಣಿಕ ಮಾಹಿತಿಗಳ ಬಗ್ಗೆ ನಿರ್ಷಿಷ್ಟ ಮಾಹಿತಿಗಳಿಲ್ಲ.

ಮತದಾರರ ಪಟ್ಟಿಯ ಪ್ರಕಾರ, ತಮ್ಮ ವಯಸ್ಸು 56 ಎಂದು ಅಫಿಡೆವಿಟ್‌ನಲ್ಲಿ ಹೇಳಿಕೊಂಡಿದ್ದಾರೆ. ಆದರೆ, ಇದಕ್ಕೆ ಸಂಬಂಧಿಸಿ ಯಾವುದೇ ಶಾಲಾ ದಾಖಲಾತಿಯನ್ನು ನೀಡಿಲ್ಲ.

ADVERTISEMENT

‘ಚೌಧರಿ ಅವರು 10ನೇ ತರಗತಿಯನ್ನೂ ಪೂರೈಸಿಲ್ಲ’ ಎಂದು ಪ್ರಶಾಂತ್‌ ಕಿಶೋರ್ ಆರೋಪಿಸುತ್ತಾರೆ. ಆದರೆ, ಚೌಧರಿ ಅವರು ತಮ್ಮ ಅಫಿಡೆವಿಟ್‌ನಲ್ಲಿ ತಾವು ಕಾಮರಾಜ್‌ ವಿಶ್ವವಿದ್ಯಾಲಯದಿಂದ ‘ಪಿಎಫ್‌ಸಿ’ ಎಂಬ ಅತ್ಯುನ್ನತ ಪದವಿ ವ್ಯಾಸಂಗ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ತಮಗೆ ಗೌರವ ಡಿ.ಲಿಟ್ ಸಂದಿರುವುದಾಗಿಯೂ ಹೇಳಿಕೊಂಡಿದ್ದಾರೆ.

ಪ್ರಶಾಂತ್‌ ಅವರ ಆರೋಪಗಳ ಕುರಿತು ಈ ಹಿಂದೆಯೇ ಚೌಧರಿ ಅವರ ಪ್ರತಿಕ್ರಿಯೆಯನ್ನು ಪತ್ರಕರ್ತರು ಕೇಳಿದ್ದರು. ಆ ವೇಳೆ ‘ಪಿಎಫ್‌ಸಿ’ ಅಂದರೆ ಏನು ಎನ್ನುವುದನ್ನು ವಿವರಿಸಲು ಚೌಧರಿ ಅವರು ತಡಕಾಡಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹರಿದಾಡಿವೆ. ಎರಡು ಬಾರಿ ಶಾಸಕರಾಗಿರುವ ಚೌಧರಿ ಅವರ ಬಳಿ ಚರಾಸ್ಥಿ ಮತ್ತು ಸ್ಥಿರಾಸ್ತಿಗಳು ಸೇರಿ ₹10 ಕೋಟಿಯಷ್ಟಿದೆ.