ADVERTISEMENT

ನಿತೀಶ್‌–ತೇಜಸ್ವಿ: ಯಾರಿಗೆ ಬಿಹಾರ ಗದ್ದುಗೆ?

ಪಿಟಿಐ
Published 9 ನವೆಂಬರ್ 2020, 12:38 IST
Last Updated 9 ನವೆಂಬರ್ 2020, 12:38 IST
ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರು ಸೋಮವಾರ ಕುಟುಂಬದವರೊಂದಿಗೆ ಜನ್ಮದಿನ ಆಚರಿಸಿಕೊಂಡರು –ಪಿಟಿಐ ಚಿತ್ರ
ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರು ಸೋಮವಾರ ಕುಟುಂಬದವರೊಂದಿಗೆ ಜನ್ಮದಿನ ಆಚರಿಸಿಕೊಂಡರು –ಪಿಟಿಐ ಚಿತ್ರ   

ಪಟ್ನಾ: ಬಿಹಾರದಲ್ಲಿ ಮತ್ತೆ ನಿತೀಶ್‌ ಕುಮಾರ್‌ ಆಳ್ವಿಕೆ ಮುಂದುವರಿಯಲಿದೆಯೇ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ನೇತೃತ್ವದ ಮಹಾ ಘಟಬಂಧನವು‌ ಅಧಿಕಾರದ ಗದ್ದುಗೆ ಏರಲಿದೆಯೇ. ಇಂತಹ ಹಲವುಕುತೂಹಲಗಳಿಗೆ ಮಂಗಳವಾರ ತೆರೆ ಬೀಳಲಿದೆ.

ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಮತದಾನ ನಡೆದಿದ್ದು, ಮಂಗಳವಾರ ಮತ ಎಣಿಕೆ ಕಾರ್ಯ ಜರುಗಲಿದೆ.38 ಜಿಲ್ಲೆಗಳ55 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.

ಜೆಡಿಯು ಮತ್ತು ಬಿಜೆಪಿ ಸಹಭಾಗಿತ್ವದ ಎನ್‌ಡಿಎ ಮೈತ್ರಿಕೂಟಈ ಬಾರಿ ಅಧಿಕಾರ ಕಳೆದುಕೊಳ್ಳಲಿದ್ದು, ತೇಜಸ್ವಿ ನೇತೃತ್ವದ ಮಹಾಘಟಬಂಧನಕ್ಕೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ತಿಳಿಸಿವೆ.

ADVERTISEMENT

‘ಎಲೆಕ್ಟ್ರಾನಿಕ್‌ ಮತ ಯಂತ್ರಗಳನ್ನು ಇಟ್ಟಿರುವ ಕೊಠಡಿಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಅಂಚೆ ಮತಗಳ ಎಣಿಕೆ ಮುಗಿದ ಬಳಿಕ ಸ್ಟ್ರಾಂಗ್‌ ರೂಂಗಳ ಬಾಗಿಲು ತೆರೆಯಲಾಗುತ್ತದೆ’ ಎಂದು ಮುಖ್ಯ ಚುನಾವಣಾ ಅಧಿಕಾರಿ ಎಚ್‌.ಆರ್‌.ಶ್ರೀನಿವಾಸ ಅವರು ಸೋಮವಾರ ಹೇಳಿದ್ದಾರೆ.

ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್‌ ಅವರು ವೈಶಾಲಿ ಜಿಲ್ಲೆಯ ರಾಘವ್‌ಪುರ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ಚುನಾವಣಾ ಕಣಕ್ಕಿಳಿದಿದ್ದಾರೆ. ಅವರ ತಂದೆ ಲಾಲು ಪ್ರಸಾದ್‌ ಮತ್ತು ತಾಯಿ ರಾಬ್ಡಿ ದೇವಿ ಅವರೂ ಹಿಂದೆ ಇದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರು.

ತೇಜಸ್ವಿ ಅವರ ಹಿರಿಯ ಸಹೋದರ ತೇಜ್‌ ಪ್ರತಾಪ್‌ ಯಾದವ್‌ ಅವರು ಸಮಷ್ಟಿಪುರ ಜಿಲ್ಲೆಯ ಹಸನ್‌ಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಈ ಎರಡು ಕ್ಷೇತ್ರಗಳ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.

ಹಾಲಿ ಸಚಿವರಾದ ನಂದಕಿಶೋರ್‌ ಯಾದವ್‌ (ಪಟ್ನಾ ಸಾಹೀಬ), ಪ್ರಮೋದ್‌ ಕುಮಾರ್‌ (ಮೋತಿಹಾರಿ), ರಾಣಾ ರಣಧೀರ್‌ (ಮಧುಬನ್‌), ಸುರೇಶ್‌ ಶರ್ಮಾ (ಮುಜಾಫರ್‌ನಗರ), ಶ್ರವಣ ಕುಮಾರ್‌ (ನಳಂದ), ಜೈ ಕುಮಾರ್‌ ಸಿಂಗ್‌ (ದಿನಾರ) ಮತ್ತು ಕೃಷ್ಣಾನಂದನ್‌ ಪ್ರಸಾದ್‌ ವರ್ಮಾ (ಜೆಹನಾಬಾದ್‌) ಅವರ ಭವಿಷ್ಯವೂ ಮಂಗಳವಾರ ನಿರ್ಧಾರಿತವಾಗಲಿದೆ.

ಕುಖ್ಯಾತ ರೌಡಿಗಳಾದ ಅನಂತ್‌ ಸಿಂಗ್‌ (ಮೋಕಾಮ) ಮತ್ತು ರೀತ್‌ಲಾಲ್‌ ಯಾದವ್‌ (ದಾನಾಪುರ್‌) ಅವರು ಆರ್‌ಜೆಡಿಯಿಂದ ಸ್ಪರ್ಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.