ಲಾಲು ಪ್ರಸಾದ್ ಯಾದವ್
ಪಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್‌ಜೆಡಿಯ ಅಗ್ರಗಣ್ಯ ನಾಯಕ ಲಾಲು ಪ್ರಸಾದ್ ಯಾದವ್ ಅವರಿಗೆ ಭಾರತ ರತ್ನ ನೀಡಲು ಬಿಹಾರ ವಿಧಾನಸಭೆ ನಿರ್ಣಯ ಕೈಗೊಳ್ಳಬೇಕು ಎಂದು ಆರ್‌ಜೆಡಿ ಶಾಸಕ ಮುಕೇಶ್ ಕುಮಾರ್ ರೌಶಾನ್ ಅವರು ಒತ್ತಾಯಿಸಿದ್ದಾರೆ.
ಅಧಿವೇಶನ ನಡೆಯುವ ವೇಳೆ ವಿಧಾನಸಭೆಯಲ್ಲಿ ಖಾಸಗಿ ಮಸೂದೆಯನ್ನು ಮಂಡಿಸಿದ ರೌಶಾನ್ ಅವರು, ‘ಲಾಲು ಪ್ರಸಾದ್ ಯಾದವ್ ಅವರು ದೇಶದಲ್ಲಿ ಸಾಮಾಜಿಕ ನ್ಯಾಯವನ್ನು ತಂದವರು. ಧ್ವನಿ ಇಲ್ಲದವರಿಗೆ ಧ್ವನಿಯಾಗಿದ್ದವರು. ಅವರಿಗೆ ಭಾರತ ರತ್ನ ಪುರಸ್ಕಾರ ಸಿಗುವಂತೆ ನಿರ್ಣಯ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
‘ತಮ್ಮ ಜೀವನವನ್ನು ಲಾಲು ಅವರು ದೀನ ದಲಿತರ ಸೇವೆಗೆ ಮುಡಿಪಾಗಿಟ್ಟಿದ್ದಾರೆ. ಹೀಗಾಗಿ ಅವರಿಗೆ ಭಾರತ ರತ್ನ ದೊರೆಯಲೇಬೇಕು’ ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಹಾರ ಕಾನೂನು ಸಚಿವ ವಿಜಯ್ ಕುಮಾರ್ ಚೌಧರಿ, ‘ಖಾಸಗಿ ಮಸೂದೆಯಲ್ಲಿ ಭಾರತ ರತ್ನಕ್ಕೆ ಸಂಬಂಧಿಸಿದಂತೆ ನಿರ್ಣಯ ಕೈಗೊಳ್ಳಲು ಸಂವಿಧಾನದಲ್ಲಿ ಅವಕಾಶ ಇಲ್ಲ. ಮಸೂದೆಯನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಮುಕೇಶ್ ಅವರಿಗೆ ಹೇಳಿದರೂ ಅವರು ಕೇಳಲಿಲ್ಲ. ನಂತರ ಧ್ವನಿ ಮತದ ಮೂಲಕ ಅವರಿಗೆ ಸೋಲಾಗಿದೆ’ ಎಂದು ಹೇಳಿದರು.
ಇದಕ್ಕೂ ಮೊದಲು ಆರ್‌ಜೆಡಿ ನಾಯಕರು, ಕಾರ್ಯಕರ್ತರು ಲಾಲು ಅವರಿಗೆ ಭಾರತ ರತ್ನ ನೀಡಿ ಎಂದು ಹಲವು ಸಾರಿ ಪ್ರತಿಭಟನೆಗಳನ್ನು ಮಾಡಿದ್ದಾರೆ. ಆರ್‌ಜೆಡಿ ನಾಯಕ ಹಾಗೂ ಲಾಲು ಪುತ್ರ ತೇಜಸ್ವಿ ಯಾದವ್ ಅವರೂ ತನ್ನ ತಂದೆಗೆ ಭಾರತ ರತ್ನ ನೀಡಬೇಕೆಂಬ ಕೂಗನ್ನು ಹಲವಾರು ಬಾರಿ ಬೆಂಬಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.