ADVERTISEMENT

ಬಿಹಾರ: ಶಿಕ್ಷಣ ಸಚಿವ ಮೇವಾಲಾಲ್ ವಜಾಗೆ ಆರ್‌ಜೆಡಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2020, 19:27 IST
Last Updated 18 ನವೆಂಬರ್ 2020, 19:27 IST
ಮೆವಾಲಾಲ್‌ ಚೌಧರಿ (ಟ್ವಿಟರ್ ಚಿತ್ರ)
ಮೆವಾಲಾಲ್‌ ಚೌಧರಿ (ಟ್ವಿಟರ್ ಚಿತ್ರ)   

ಪಟ್ನಾ: ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಜೆಡಿಯುನ ಮೆವಾಲಾಲ್‌ ಚೌಧರಿ ಅವರನ್ನು ಶಿಕ್ಷಣ ಸಚಿವರನ್ನಾಗಿ ನೇಮಿಸಿರುವುದಕ್ಕೆ ವಿರೋಧ ಪಕ್ಷವಾದ ಆರ್‌ಜೆಡಿ ಹಾಗೂ ಅದರ ಮಿತ್ರಪಕ್ಷಗಳು ವಿರೋಧವ್ಯಕ್ತಪಡಿಸಿದ್ದು, ಅವರನ್ನು ವಜಾಗೊಳಿಸಲು
ಆಗ್ರಹಿಸಿವೆ.

‘ಮೆವಾಲಾಲ್‌ ಚೌಧರಿ ಅವರಿಗೆ ಭ್ರಷ್ಟಾಚಾರ ನಡೆಸಲು, ಲೂಟಿ ಹೊಡೆಯಲು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸ್ವಾತಂತ್ರ್ಯ ನೀಡಿದ್ದಾರೆಯೆ?’ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಟ್ವೀಟ್‌ ಮಾಡಿದ್ದಾರೆ. ‘ಆರೋಪಿಯೊಬ್ಬರನ್ನು ಶಿಕ್ಷಣ ಸಚಿವರನ್ನಾಗಿ ಮಾಡಲಾಗಿದೆ. ಆದರೆ, ಅಲ್ಪಸಂಖ್ಯಾತ ಸಮುದಾಯದಿಂದ ಒಬ್ಬರೂ ಸಂಪುಟದಲ್ಲಿ ಇಲ್ಲ’ ಎಂದಿದ್ದಾರೆ.

ಚೌಧರಿ, ಬಿಹಾರ ಕೃಷಿ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಸಂದರ್ಭದಲ್ಲಿ ಪ್ರಾಧ್ಯಾಪಕರು ಹಾಗೂ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ನಡೆದ ಅಕ್ರಮದ ಕುರಿತು 2017ರಲ್ಲಿ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಇದಾದ ನಂತರ, ಜೆಡಿಯು ಅವರನ್ನು ಅಮಾನತುಗೊಳಿಸಲಾಗಿತ್ತು. ಅಂದು ವಿಪಕ್ಷದಲ್ಲಿದ್ದ ಬಿಜೆಪಿ ಈ ವಿಷಯವನ್ನು ಪ್ರಸ್ತಾಪಿಸಿ ಪ್ರತಿಭಟನೆ ನಡೆಸಿತ್ತು.

ADVERTISEMENT

‘ಮೆವಾಲಾಲ್‌ ವಿಷಯವನ್ನು ಇರಿಸಿಕೊಂಡು ಜೆಡಿಯು ವಿರುದ್ಧ ವಾಗ್ದಾಳಿ ನಡೆಸಿತ್ತಿದ್ದ ಬಿಜೆಪಿ ಇಂದು ಮೌನವಾಗಿದೆ’ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ ಟ್ವೀಟ್‌ ಮೂಲಕ ಟೀಕಿಸಿದ್ದಾರೆ. ಮೇವು ಹಗರಣದಲ್ಲಿ ಜೈಲಿನಲ್ಲಿರುವ ಲಾಲೂ ಅವರ ಟ್ವಿಟರ್‌ ಖಾತೆಯನ್ನು ಅವರ ಕಚೇರಿಯು ನಿಭಾಯಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.