
ಬಾಗಲ್ಪುರ/ದರ್ಭಾಂಗ: ಮೈಸೂರು ಜಿಲ್ಲೆ ಹುಣಸೂರಿನಲ್ಲಿ ನಡೆದಿದ್ದ ಭಾರಿ ಮೌಲ್ಯದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಎಸ್‌ಟಿಎಫ್ ಸಹಯೋಗದಲ್ಲಿ ಕರ್ನಾಟಕದ ಪೊಲೀಸರು ಬಾಗಲ್ಪುರ ಹಾಗೂ ದರ್ಭಾಂಗದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ದರೋಡೆಕೋರರನ್ನು ಬಂಧಿಸಿದ್ದಾರೆ.
ಬಂಧಿತರನ್ನು ದರ್ಭಾಂಗದ ಹೃಷಿಕೇಶ್ ಸಿಂಗ್ ಹಾಗೂ ಬಾಗಲ್ಪುರದ ಪಂಕಜ್ ಕುಮಾರ್ ಅಲಿಯಾಸ್ ಸತುಅ ಎಂದು ಗುರುತಿಸಲಾಗಿದೆ.
ಬಂಧಿತರು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದ್ದ ಚಿನ್ನ, ವಜ್ರದ ಅಂಗಡಿಯ ದರೋಡೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ದರ್ಬಾಂಗ, ಬಾಗಲ್ಪುರ ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸರ ಸಹಯೋಗದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಬಿಹಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2025 ರ ಡಿಸೆಂಬರ್ 28ರಂದು ಇಬ್ಬರು ಆರೋಪಿಗಳ ವಿರುದ್ಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ(ಬಿಎನ್‌ಎಸ್) ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಅಡಿ ಪ್ರಕರಣ ದಾಖಲಾಗಿತ್ತು.
‘ಬಂಧಿತರಿಂದ ಒಂದು ಚಿನ್ನದ ಸರ, ₹1 ಲಕ್ಷ ಮೌಲ್ಯದ ಚಿನ್ನದ ಉಂಗುರ, ಮೋಟಾರ್ ಸೈಕಲ್ ಹಾಗೂ ಆಭರಣ ಸಂಗ್ರಹಿಸಿಡುವ ಪೆಟ್ಟಿಗೆಯನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಪಂಕಜ್ ವಿರುದ್ಧ ಬಿಹಾರ, ಜಾರ್ಖಂಡ್, ಕರ್ನಾಟಕ, ರಾಜಸ್ಥಾನದ ವಿವಿಧ ಠಾಣೆಗಳಲ್ಲಿ ಕೊಲೆ ಯತ್ನ, ದರೋಡೆ, ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಸೇರಿದಂತೆ 16 ಪ್ರಕರಣಗಳು ದಾಖಲಾಗಿವೆ. ಹೃಷಿಕೇಶ್ ಸಿಂಗ್ ವಿರುದ್ಧ ಕೊಲೆ, ದರೋಡೆ, ಡಕಾಯಿತಿ ಬಿಹಾರದ ಪೂರ್ನಿಯಾ, ನೌಗಚಿಯಾ ಹಾಗೂ ಮೈಸೂರಿನ ಹುಣಸೂರು ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಸೇರಿದಂತೆ 4 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.