ADVERTISEMENT

Bihar SIR | ಪ್ರಮಾಣ ಪತ್ರಕ್ಕಾಗಿ ಅಲೆದಾಟ: ಕೂಲಿ ಇಲ್ಲದೆ ಪರದಾಟ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 23:56 IST
Last Updated 13 ಆಗಸ್ಟ್ 2025, 23:56 IST
   

ಅಹಮದಾಬಾದ್‌: ವರ್ಷದ ಹಿಂದಷ್ಟೇ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಿದ್ದೇವೆ. ಆದರೆ, ಇತ್ತೀಚೆಗೆ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಕರಡು ಮತದಾರರ ಪಟ್ಟಿಯಲ್ಲಿ ನನ್ನ ಮತ್ತು ಪತ್ನಿಯ ಹೆಸರಿಲ್ಲ. ಮತಗಟ್ಟೆ ಅಧಿಕಾರಿಯನ್ನು ವಿಚಾರಿಸಿದರೆ, ವಾಸಸ್ಥಳದ ದೃಢೀಕರಣ ಪತ್ರ, ಪೂರಕ ಪ್ರಮಾಣ ಪತ್ರಗಳನ್ನು ತಂದು ಕೊಡಿ ಎನ್ನುತ್ತಿದ್ದಾರೆ. ಕೂಲಿ ಕಾರ್ಮಿಕರಾದ ನಾವು ನಿತ್ಯದ ₹300 ದುಡಿಮೆಯನ್ನು ಬಿಟ್ಟು ಒಂದು ವಾರದಿಂದ ‘ಬಿಎಲ್‌ಒ’ ಕಚೇರಿಗೆ ಅಲೆಯುತ್ತಿದ್ದೇವೆ. ಹೀಗಾದರೆ ನಮ್ಮ  ಹೊಟ್ಟೆಪಾಡಿಗೆ ಏನು ಮಾಡುವುದು?  

ಇದು ಬಿಹಾರದ ಕಿಶನ್‌ಗಂಜ್‌ ಬ್ಲಾಕ್‌ ಚೌಕ್‌ನ ನಿವಾಸಿ, ಕೂಲಿ ಕಾರ್ಮಿಕ ಮಹಮ್ಮದ್‌ ಹಾಸೀಮ್‌ ಅವರ ಪ್ರಶ್ನೆ.

‘ಮತದಾರರ ಪಟ್ಟಿಯಿಂದ ನನ್ನ ಮತ್ತು ಪತ್ನಿಯ ಹೆಸರನ್ನು ಅಳಿಸಿ ಹಾಕಲಾಗಿದೆ’ ಎನ್ನುವುದು ಅವರ ದೂರು. ‘ಪಟ್ಟಿಯಲ್ಲಿ ಹೆಸರು ಸೇರಿಸಬೇಕಿದ್ದರೆ 2003ರ ಮತದಾರರ ಪಟ್ಟಿ ತಂದುಕೊಡಿ ಎನ್ನುತ್ತಿದ್ದಾರೆ ಅಧಿಕಾರಿಗಳು. ನಾನು ನಿತ್ಯದ ಕೂಲಿಯನ್ನು ಬಿಟ್ಟು ಇದರ ಹಿಂದೆ ಹೋದರೆ ನನ್ನ ಕುಟುಂಬವನ್ನು ನೋಡಿಕೊಳ್ಳುವರು ಯಾರು, ನಾವು ಹೊಟ್ಟೆಪಾಡಿಗೆ ಏನು ಮಾಡಬೇಕು’ ಎನ್ನುವುದು ಅವರ ನೋವಿನ ನುಡಿ. 

ADVERTISEMENT

ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು (ಎಸ್‌ಐಆರ್‌) ಮುಖ್ಯವಾಗಿ ಅಲ್ಪಸಂಖ್ಯಾತ ಸಮುದಾಯದಲ್ಲಿ ಹೆಚ್ಚಿನ ಗೊಂದಲ– ಹತಾಶೆ ಮೂಡಿಸಿದೆ. ಕರಡು ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದವರಲ್ಲಿ ಹೆಚ್ಚಿನವರು ಅಲ್ಪಸಂಖ್ಯಾತ ಸಮುದಾಯದವರೇ ಆಗಿದ್ದಾರೆ. ಇವರಲ್ಲಿ ಕೃಷಿ ಕಾರ್ಮಿಕರು, ದಿನಗೂಲಿ ನೌಕರರು, ಬೀದಿ ಬದಿ ವ್ಯಾಪಾರಿಗಳು ಹೀಗೆ ನಿತ್ಯದ ಕೂಲಿಯನ್ನೇ ನೆಚ್ಚಿಕೊಂಡವರು ಗರಿಷ್ಠ ಸಂಖ್ಯೆಯಲ್ಲಿದ್ದಾರೆ. ‘ಎಸ್‌ಐಆರ್‌’ ಇವರೆಲ್ಲರ ನಿತ್ಯದ ದುಡಿಮೆಗೆ ಕುತ್ತು ತಂದಿರುವುದು ಮಾತ್ರವಲ್ಲ, ವಾಸ ಸ್ಥಳದ ದೃಢೀಕರಣ ಪತ್ರಕ್ಕಾಗಿ ಅಲೆಯುವಂತೆಯೂ ಮಾಡಿದೆ.

ಕಿಶನ್‌ಗಂಜ್‌ ಜಿಲ್ಲೆಯು ಪಶ್ಚಿಮ ಬಂಗಾಳ ಮತ್ತು ನೇಪಾಳದೊಂದಿಗೆ ಗಡಿ ಹಂಚಿಕೊಂಡಿದೆ. ಬಾಂಗ್ಲಾದೇಶ ಇಲ್ಲಿಂದ 21 ಕಿ.ಮೀ ದೂರದಲ್ಲಿದೆ. ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸುವಂತೆ ಚುನಾವಣಾ ಆಯೋಗ ಸೂಚಿಸಿದ ಬೆನ್ನಲ್ಲೇ ಇಲ್ಲಿನ ಅಲ್ಪಸಂಖ್ಯಾತ ಸಮುದಾಯದಲ್ಲಿ ಆತಂಕ ಮೂಡಿದೆ. ಪಾಟ್ನಾ, ಬೇಗುಸರಾಯ್‌, ಪೂರ್ಣಿಯಾ, ಖಗಾರಿಯಾ, ಕಿಶನ್‌ಗಂಜ್‌ ಜಿಲ್ಲೆಗಳಲ್ಲಿ ‘ಪ್ರಜಾವಾಣಿ’ ಪ್ರತಿನಿಧಿ ಮೂರು ದಿನಗಳಿಂದ ನಡೆಸುತ್ತಿರುವ ಯಾತ್ರೆಯಲ್ಲಿ ಅಲ್ಪಸಂಖ್ಯಾತ ಸಮುದಾಯದಲ್ಲಿ ಗೊಂದಲ–ಹತಾಶೆ ಹೆಚ್ಚಿರುವುದು ಕಂಡುಬಂತು. 

2011ರ ಸಮೀಕ್ಷೆ ಪ್ರಕಾರ, ಕಿಶನ್‌ಗಂಜ್‌ ಜಿಲ್ಲೆಯ ಜನಸಂಖ್ಯೆ 10.70 ಲಕ್ಷ ಇದೆ. ಜಿಲ್ಲಾಡಳಿತದ ವೆಬ್‌ಸೈಟ್‌ನಲ್ಲಿರುವ ಮಾಹಿತಿಯಂತೆ ಅಲ್ಲಿನ ಸಾಕ್ಷರತಾ ಪ್ರಮಾಣ 64.24. ಮುಸ್ಲಿಮರ ಸಂಖ್ಯೆ ಹೆಚ್ಚಿರುವ ಜಿಲ್ಲೆಗಳಲ್ಲಿ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ಜನರ ಹೆಸರುಗಳು ಕಣ್ಮರೆಯಾಗಿವೆ. ಕೆಲವೆಡೆ ವಾಸಸ್ಥಳದ ದೃಢೀಕರಣ ಪತ್ರ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎನ್ನುವುದು ಮತದಾರರ ದೂರು.  

‘ನಾವು ಅನಕ್ಷರಸ್ಥರು. ಆಧಾರ್‌ ಕಾರ್ಡ್‌ ಮತ್ತಿತರ ದಾಖಲೆಗಳನ್ನು ತೆಗೆದುಕೊಂಡು ಬರಲು ಹೇಳಿದರು. ಈಗ ವಾಸ ಸ್ಥಳದ ದೃಢೀಕರಣ ಪತ್ರ ಬೇಕೆಂದು ಹೇಳುತ್ತಿದ್ದಾರೆ. ತಂದಿರುವ ದಾಖಲೆಗಳನ್ನು ‘ಬಿಡಿಒ’ಗೆ ಸಲ್ಲಿಸಿ ಎಂದು ಶಾಲೆಯ ಶಿಕ್ಷಕರು (ಬಿಎಲ್‌ಒ) ಹೇಳಿದ್ದಾರೆ. ಆದರೆ, ಅವರು ನಮ್ಮ ಅರ್ಜಿ ಸ್ವೀಕರಿಸುತ್ತಿಲ್ಲ. ನಮಗೆ  ಏನು ಮಾಡಬೇಕೆಂದು ತಿಳಿದಿಲ್ಲ. ಯಾರೂ ನಮಗೆ ಸರಿಯಾಗಿ ಮಾಹಿತಿಯನ್ನು ನೀಡುತ್ತಿಲ್ಲ. ಮತದಾರರ ಪಟ್ಟಿಯಿಂದ ನಮ್ಮ ಹೆಸರನ್ನೇಕೆ ಅಳಿಸಿ ಹಾಕಲಾಗಿದೆ’ ಎಂದು ಕಿಶನ್‌ಗಂಜ್‌ನ ಅಸೀಂ ಅಲಿ ಪ್ರಶ್ನಿಸಿದರು. 

‘ಮತದಾರರಲ್ಲಿರುವ ಗೊಂದಲ ನಿವಾರಿಸುವಂತೆ ರಾಜಕೀಯ ಪಕ್ಷಗಳ ಬೂತ್‌ ಮಟ್ಟದ ಏಜೆಂಟರಿಗೆ ಮನವಿ ಮಾಡಲಾಗಿದೆ ಎಂದು ಕಿಶನ್‌ಗಂಜ್‌ನ ಮತಗಟ್ಟೆ ಅಧಿಕಾರಿಯೊಬ್ಬರು ಹೇಳಿದರು. ಮತದಾರರ ಪಟ್ಟಿಯಲ್ಲಿ  ಹೆಚ್ಚಿನ ಸಂಖ್ಯೆಯ ಜನರ ಹೆಸರು ಕೈಬಿಡಲಾಗಿರುವ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. ‘ಸಮಸ್ಯೆ ಶೀಘ್ರದಲ್ಲೇ ಬಗೆಹರಿಯಲಿದೆ’ ಎಂದು ಬಿಡಿಒ ಸಾಹಿಬ್‌ ವಿಶ್ವಾಸ ವ್ಯಕ್ತಪಡಿಸಿದರು.

‘ವಲಸಿಗ ಮುದ್ರೆಯೊತ್ತುವ ಆತಂಕ’
ಬಿಹಾರದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‌ಆರ್‌ಸಿ) ಜಾರಿಗೊಳಿಸುವುದರ ಭಾಗವಾಗಿಯೇ ‘ಎಸ್‌ಐಆರ್‌’ ನಡೆಯುತ್ತಿದೆ ಎಂಬ ಭಾವನೆ ಅಲ್ಪಸಂಖ್ಯಾತರಲ್ಲಿ ಬಲವಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರನ್ನು ಅಧಿಕಾರಿಗಳು ಅಕ್ರಮ ಬಾಂಗ್ಲಾ ವಲಸಿಗರು ಎಂದು ಮುದ್ರೆಯೊತ್ತುವ ಆತಂಕವೂ ಅವರಲ್ಲಿದೆ ಎಂದು ಪೂರ್ಣಿಯಾ ಜಿಲ್ಲೆಯ ಸಂಯುಕ್ತ ಜನತಾ ದಳದ ಮುಖಂಡರೊಬ್ಬರು ಹೇಳಿದರು.
‘ಆಯೋಗ ಇನ್ನೂ 6 ತಿಂಗಳು ಸಮಯ ನೀಡಿದರೆ ಈ ಗೊಂದಲಗಳನ್ನು ನಿವಾರಿಸಬಹುದು. ಬಿಎಲ್‌ಒಗಳು ಮಾತ್ರವಲ್ಲ ಮತದಾರರು ಸಹ ತೊಂದರೆಗೆ ಸಿಲುಕಿದ್ದಾರೆ
ಫರ್ವೇಜ್‌ ಆಲಂ ಗುಡ್ಡು, ಕಿಶನ್‌ಗಂಜ್‌ನ  ಜಿಡಿಯುನ ಯುವ ಘಟಕದ ಮಾಜಿ ಅಧ್ಯಕ್ಷ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.