ನವದೆಹಲಿ: ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ನಡೆಸುತ್ತಿದ್ದು, ರಾಜ್ಯದ 7.89 ಕೋಟಿ ಮತದಾರರ ಪೈಕಿ 2.93 ಕೋಟಿ ಮತದಾರರು ತಮ್ಮ ಅರ್ಹತೆಯ ದಾಖಲೆಗಳನ್ನು ಸಲ್ಲಿಸಬೇಕಿದೆ.
‘ಪ್ರತಿ ಮತದಾರರ ಅರ್ಹತೆಯನ್ನು ಪರಿಶೀಲಿಸುವ ಕಾರ್ಯ ಬಿಹಾರದಲ್ಲಿ ಈಗಾಗಲೇ ಆರಂಭವಾಗಿದ್ದು, ಎಲ್ಲ ಪಕ್ಷಗಳು ಪೂರ್ಣವಾಗಿ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿವೆ’ ಎಂದು ಚುನಾವಣಾ ಆಯೋಗ ಶನಿವಾರ ತಿಳಿಸಿದೆ. ಆದರೆ ಆಯೋಗದ ಈ ಕಾರ್ಯವನ್ನು ವಿರೋಧ ಪಕ್ಷಗಳು ಟೀಕಿಸಿವೆ.
ತನ್ನ ಕಾರ್ಯವನ್ನು ಸಮರ್ಥಿಸಿಕೊಂಡಿರುವ ಆಯೋಗವು, ‘ಸಂವಿಧಾನ ಸರ್ವೋಚ್ಚವಾದದ್ದು, ದೇಶದ ಎಲ್ಲ ಪ್ರಜೆಗಳು ಅದನ್ನು ಪಾಲಿಸುತ್ತಾರೆ. ರಾಜಕೀಯ ಪಕ್ಷಗಳು ಮತ್ತು ಆಯೋಗವು ಸಂವಿಧಾನವನ್ನು ಅನುಸರಿಸುತ್ತವೆ. ಮತದಾರರಾಗಲು ಇರಬೇಕಾದ ಅರ್ಹತೆಗಳ ಬಗ್ಗೆ ಸಂವಿಧಾನದ 326ನೇ ವಿಧಿ ಸ್ಪಷ್ಟವಾಗಿ ಹೇಳುತ್ತದೆ’ ಎಂದು ತಿಳಿಸಿದೆ.
ಈ ಹಿಂದೆ 2003ರಲ್ಲಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ನಡೆದಿತ್ತು. ಆ ಪಟ್ಟಿಯಲ್ಲಿ 4.96 ಕೋಟಿ ಮತದಾರರ ಹೆಸರುಗಳಿವೆ. ಹೀಗಾಗಿ ಅವರುಗಳಿಗೆ ಸಂಬಂಧಿಸಿದಂತೆ ಸರಳ ಪರಿಶೀಲನೆಯಷ್ಟೇ ನಡೆಯುತ್ತದೆ. ಈ ಪಟ್ಟಿಯಲ್ಲಿ ಹೆಸರು ಇಲ್ಲದ ಮತದಾರರು ನಿಗದಿತ ಅರ್ಜಿ ನಮೂನೆಯ ಜತೆಗೆ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಬೇಕು ಎಂದು ಆಯೋಗ ವಿವರಿಸಿದೆ.
ಆಯೋಗದ ಈ ಪ್ರಕ್ರಿಯೆಯನ್ನು ಟೀಕಿಸಿರುವ ವಿರೋಧ ಪಕ್ಷಗಳು, ಬಿಹಾರದ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಹಿಂಬಾಗಿಲ ಮೂಲಕ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‌ಆರ್‌ಸಿ) ತರುತ್ತಿದೆ ಎಂದು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.