ADVERTISEMENT

Bihar SIR- ಬಿಹಾರದ ವಿಶೇಷ ಸಮಗ್ರ ಪರಿಷ್ಕರಣೆ ‘ಮತದಾರ ಸ್ನೇಹಿ’: ಸುಪ್ರೀಂ ಕೋರ್ಟ್

ಪಿಟಿಐ
Published 13 ಆಗಸ್ಟ್ 2025, 10:29 IST
Last Updated 13 ಆಗಸ್ಟ್ 2025, 10:29 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ‘ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮತದಾರರು 11 ದಾಖಲೆಗಳ ಪೈಕಿ ಒಂದನ್ನು ಸಲ್ಲಿಸಬೇಕಿದೆ. ಹಿಂದಿನ ಪರಿಷ್ಕರಣೆ ವೇಳೆ ಅದು ಏಳು ದಾಖಲೆಗಳಿಗೆ ಸೀಮಿತವಾಗಿತ್ತು. ಹೀಗಾಗಿ ಎಸ್‌ಐಆರ್‌ ಪ್ರಕ್ರಿಯೆಯು ಮತದಾರರ ಸ್ನೇಹಿ ಯಂತೆ ಕಾಣುತ್ತಿದೆ’ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಅಭಿಪ್ರಾಯಪಟ್ಟಿದೆ.     

ಚುನಾವಣಾ ಆಯೋಗ ಬಿಹಾರದಲ್ಲಿ ನಡೆಸುತ್ತಿರುವ ಎಸ್ಐಆರ್‌ ಪ್ರಕ್ರಿಯೆಯ ವಿರುದ್ಧ ಸಲ್ಲಿಕೆ ಆಗಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜಾಯ್‌ಮಾಲ್ಯ ಬಾಗ್ಚಿ ನಡೆಸಿದರು.

‘ಈ ಪ್ರಕ್ರಿಯೆಯಿಂದ ಆಧಾರ್‌ ಅನ್ನು ಹೊರಗಿಟ್ಟಿರುವುದು ಸರಿಯಲ್ಲ’ ಎಂದು ಅರ್ಜಿದಾರರು ವಾದಿಸಿದರು. ‘ಅದರ ಹೊರತಾಗಿಯೂ ಹೆಚ್ಚಿನ ಸಂಖ್ಯೆಯ ದಾಖಲೆಗಳನ್ನು ಸಲ್ಲಿಸಲು ವಾಸ್ತವವಾಗಿ ಅವಕಾಶಗಳಿವೆಯಲ್ಲ’ ಎಂದು ಪೀಠ ಪ್ರಶ್ನಿಸಿತು. 

ADVERTISEMENT

‘ನಿಮ್ಮ ವಾದ ನಮಗೆ ಅರ್ಥ ಆಗುತ್ತದೆ. ಆದರೆ, ಹಿಂದಿನ ಪರಿಷ್ಕರಣೆ ವೇಳೆ ಕೇವಲ ಏಳು ದಾಖಲೆಗಳನ್ನು ಕೇಳಲಾಗುತ್ತಿತ್ತು. ಈ ಬಾರಿಯ ಎಸ್‌ಐಆರ್‌ನಲ್ಲಿ 11 ದಾಖಲೆಗಳ ಪಟ್ಟಿಯಿದೆ. ಅವುಗಳಲ್ಲಿ ಒಂದನ್ನಷ್ಟೇ ಸಲ್ಲಿಸಬೇಕಾಗಿದೆ.ಹೀಗಾಗಿ ಈ ಪ್ರಕ್ರಿಯೆ ಮತದಾರ ಸ್ನೇಹಿಯಾಗಿ ತೋರುತ್ತಿದೆ’ ಎಂದು ಪೀಠ ಹೇಳಿತು.

ಅರ್ಜಿದಾರರ ಪರ ಹಾಜರದ ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ, ‘ದಾಖಲೆಗಳ ಸಂಖ್ಯೆ ಹೆಚ್ಚಿರಬಹುದು. ಆದರೆ ಅವುಗಳನ್ನು ಹೊಂದಿರುವವರ ಸಂಖ್ಯೆ ಕಡಿಮೆಯಿದೆ’ ಎಂದು ವಾದಿಸಿದರು.

‘ಪಾಸ್‌ಪೋರ್ಟ್‌ ದಾಖಲೆ ಕುರಿತು ವಿವರಿಸುವುದಾದರೆ, ಬಿಹಾರದಲ್ಲಿ ಕೇವಲ ಶೇಕಡ 1ರಿಂದ ಶೇ 2ರಷ್ಟು ಜನರ ಬಳಿ ಪಾಸ್‌ಪೋರ್ಟ್‌ ಇದೆ ಮತ್ತು ಅವರಿಗೆ ರಾಜ್ಯದಲ್ಲಿ ಶಾಶ್ವತ ನಿವಾಸಿ ಪ್ರಮಾಣಪತ್ರ ನೀಡಲು ಅವಕಾಶವಿಲ್ಲ’ ಎಂದು ಹೇಳಿದರು. ಆಗ ಪೀಠವು, ‘ಬಿಹಾರದಲ್ಲಿ 36 ಲಕ್ಷ ಪಾಸ್‌ಪೋರ್ಟ್ ಹೊಂದಿರುವವರು ಇದ್ದಾರೆ ಎಂಬುದು ಉತ್ತಮವೇ ಅಲ್ಲವೇ’ ಎಂದಿತು. 

‘ಹೆಚ್ಚಿನ ಜನರ ಬಳಿ ಲಭ್ಯ ಇರುವ ದಾಖಲೆಗಳನ್ನು ಖಚಿತಪಡಿಸುವ ಕುರಿತು ವಿವಿಧ ಇಲಾಖೆಗಳಿಂದ
ಪ್ರತಿಕ್ರಿಯೆಗಳನ್ನು ಪಡೆದ ಬಳಿಕವೇ ಅಲ್ಲವೇ ಸಾಮಾನ್ಯವಾಗಿ ದಾಖಲೆಗಳ ಪಟ್ಟಿಯನ್ನು ಸಿದ್ಧಪಡಿಸುವುದು’ ಎಂದು ನ್ಯಾಯಮೂರ್ತಿ ಬಾಗ್ಚಿ ಗಮನ ಸೆಳೆದರು.

ಮತದಾರರ ಪಟ್ಟಿಗೆ ಜನರನ್ನು ಸೇರಿಸುವುದು ಮತ್ತು ಹೊರಗಿಡುವುದು ಚುನಾವಣಾ ಆಯೋಗದ ವ್ಯಾಪ್ತಿಗೆ ಬರುತ್ತದೆ ಎಂದು ಪೀಠ ಮಂಗಳವಾರ ತಿಳಿಸಿತ್ತು. ಬಿಹಾರದ ಎಸ್‌ಐಆರ್‌ನಲ್ಲಿ
ಪೌರತ್ವವನ್ನು ದೃಢೀಕರಿಸಲು ಆಧಾರ್‌ ಕಾರ್ಡ್‌ ಅನ್ನು ನಿರ್ಣಾಯಕ ದಾಖಲೆಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬ ಆಯೋಗದ ನಿಲುವನ್ನೂ ಸುಪ್ರೀಂ ಕೋರ್ಟ್‌ ಬೆಂಬಲಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.