
ಸುಪ್ರೀಂ ಕೋರ್ಟ್
ನವದೆಹಲಿ: ‘ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)ಯಲ್ಲಿ ಮತದಾರರನ್ನು ಸಾಮೂಹಿಕವಾಗಿ ಹೊರಗಿಡುವ ಪ್ರಯತ್ನ ನಡೆದರೆ, ನ್ಯಾಯಾಲಯವು ಮಧ್ಯಪ್ರವೇಶಿಸಲಿದೆ. ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಆಗಸ್ಟ್ 12 ಹಾಗೂ 13ರಂದು ನಡೆಸಲಾಗುವುದು’ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಆಯೋಗದ ಕ್ರಮವನ್ನು ಪ್ರಶ್ನಿಸಿಸಿರುವ ಅರ್ಜಿದಾರರು ಆಗಸ್ಟ್ 8ರ ಒಳಗಾಗಿ ಲಿಖಿತ ಅಭಿಪ್ರಾಯ ಸಲ್ಲಿಸಬೇಕು ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜಾಯಮಾಲ್ಯಾ ಬಾಗ್ಚಿ ಅವರ ಪೀಠವು ತಿಳಿಸಿದೆ.
ಆಗಸ್ಟ್ 1ರಂದು ಪ್ರಕಟಿಸಲಿರುವ ಮತದಾರರ ಪಟ್ಟಿಯಲ್ಲಿ ಜನರು ಹೊರಗುಳಿಯುವ ಸಾಧ್ಯತೆಯಿದ್ದು, ಅವರು ಮತದಾನ ಮಾಡಲು ಅಮೂಲ್ಯ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ ಎಂದು ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲರಾದ ಕಪಿಲ್ ಸಿಬಲ್ ಹಾಗೂ ಪ‍್ರಶಾಂತ್ ಭೂಷಣ್ ಕಳವಳ ವ್ಯಕ್ತಪಡಿಸಿದರು.
‘ಎಸ್‌ಐಆರ್ ಪ್ರಕ್ರಿಯೆ ವೇಳೆ ದಾಖಲೆಗಳನ್ನು ಸಲ್ಲಿಸದ 65 ಲಕ್ಷ ಮತದಾರರನ್ನು ತೆಗೆದುಹಾಕಲಾಗಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ. ಇದರಲ್ಲಿ ಕೆಲವರು ಶಾಶ್ವತವಾಗಿ ವಲಸೆ ಹಾಗೂ ಸತ್ತಿದ್ದಾರೆ. ಪಟ್ಟಿಯಿಂದ ಹೊರಗುಳಿದವರು ಹೊಸತಾಗಿ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಆಯೋಗವು ತಿಳಿಸಿದೆ’ ಎಂದು ಪ್ರಶಾಂತ್ ಭೂಷಣ್ ನ್ಯಾಯಪೀಠದ ಗಮನಸೆಳೆದರು.
ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿಸೂರ್ಯಕಾಂತ್, ‘ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಕಾನೂನನ್ನು ಪಾಲಿಸಲಿದೆ. ಒಂದೊಮ್ಮೆ ತಪ್ಪು ಮಾಡಿದರೆ, ಅರ್ಜಿದಾರರು ನ್ಯಾಯಾಲಯ ಗಮನಕ್ಕೆ ತರಬಹುದು’ ಎಂದು ತಿಳಿಸಿತು.
‘ಕರಡು ಪಟ್ಟಿಯಲ್ಲಿ 65 ಲಕ್ಷ ಮತದಾರರನ್ನು ಹೊರಗಿಟ್ಟಿರುವ ನಿಮ್ಮ ಆತಂಕವನ್ನು ಅರ್ಥಮಾಡಿಕೊಳ್ಳುತ್ತೇವೆ. ಆಯೋಗವು ಪಟ್ಟಿಯ ತಿದ್ದುಪಡಿ ಮಾಡುತ್ತಿದ್ದು, ನ್ಯಾಯಾಂಗ ಪ್ರಾಧಿಕಾರವಾಗಿ ನಾವು ಅವಲೋಕಿಸಲಿದ್ದೇವೆ. ನೀವು ಬದುಕಿರುವ 15 ಜನರನ್ನು ಕರೆತನ್ನಿ, ಮುಂದಿನ ವಿಚಾರ ಪರಿಗಣಿಸಲಿದ್ದೇವೆ. ಒಂದೊಮ್ಮೆ ಸಾಮೂಹಿಕವಾಗಿ ಹೊರಗಿಟ್ಟರೆ ನಾವು ಕೂಡಲೇ ಮಧ್ಯಪ್ರವೇಶಿಸಲಿದ್ದೇವೆ’ ಎಂದು ನ್ಯಾಯಮೂರ್ತಿ ಜಾಯಮಾಲ್ಯಾ ಬಾಗ್ಚಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.