ADVERTISEMENT

ಬಿಹಾರದಲ್ಲಿ 20 ಸಾವಿರಕ್ಕೆ ಹೆಣ್ಣುಮಕ್ಕಳು ಸಿಗುತ್ತಾರೆ: ಉತ್ತರಾಖಂಡ ಸಚಿವೆಯ ಪತಿ

ಪಿಟಿಐ
Published 3 ಜನವರಿ 2026, 15:39 IST
Last Updated 3 ಜನವರಿ 2026, 15:39 IST
   

ಲಖನೌ: ‘ಬಿಹಾರದಲ್ಲಿ ₹20 ಸಾವಿರದಿಂದ ₹25ಸಾವಿರಕ್ಕೆ ಹೆಣ್ಣು ಮಕ್ಕಳನ್ನು ಖರೀದಿಸಬಹುದು’ ಎಂದು ಉತ್ತರಾಖಂಡದ ಮಹಿಳಾ ಮತ್ತು ಮಕ್ಕಳ ಸಚಿವೆ ರೇಖಾ ಆರ್ಯ ಅವರ ಪತಿ ಗಿರ್ಧಾರಿ ಲಾಲ್‌ ಸಾಹು ಅವರು ಹೇಳಿಕೆ ನೀಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಕೆಲವು ದಿನಗಳ ಹಿಂದಷ್ಟೇ ಅಲ್ಮೋರಾದಲ್ಲಿ ಪಕ್ಷದಿಂದ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಸಾಹು ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆಲವು ಯುವಕರ ಹೆಸರನ್ನು ಉಲ್ಲೇಖಿಸಿದ ಸಾಹು, ‘ನೀವೇನು ವೃದ್ಧರಾದ ನಂತರ ಮದುವೆಯಾಗುತ್ತೀರಾ? ಇಷ್ಟರಲ್ಲಾಗಲೇ ನಿಮಗೆ 3–4 ಮಕ್ಕಳಿರಬೇಕಿತ್ತು. ನಿಮಗೆ ಬಿಹಾರದಿಂದ ಯುವತಿಯರನ್ನು ನಾನು ಹುಡುಕುತ್ತೇನೆ. ಬಿಹಾರದಲ್ಲಿ ₹20ಸಾವಿರ– ₹25ಸಾವಿರಕ್ಕೆ ಹೆಣ್ಣು ಮಕ್ಕಳು ಸಿಗುತ್ತಾರೆ’ ಎಂದಿರುವುದು ವಿಡಿಯೊದಲ್ಲಿದೆ.

ADVERTISEMENT

ಈ ಬಗ್ಗೆ ರಾಜ್ಯ ಮಹಿಳಾ ಆಯೋಗವು ಆಕ್ಷೇಪ ವ್ಯಕ್ತಪಡಿಸಿ, ಹೇಳಿಕೆ ಕುರಿತು ಸ್ಪಷ್ಟನೆ ನೀಡುವಂತೆ ಸಾಹು ಅವರನ್ನು ಕೇಳಿದೆ. ಪ್ರತಿಪಕ್ಷ ಕಾಂಗ್ರೆಸ್‌ ಕೂಡ ವಿಚಾರವನ್ನು ಖಂಡಿಸಿ,‘ ಬಿಜೆಪಿಯ ಮಹಿಳಾ ವಿರೋಧಿ ಮನಸ್ಥಿತಿಯನ್ನು ಈ ಹೇಳಿಕೆ ಬಹಿರಂಗಪಡಿಸುತ್ತದೆ’ ಎಂದು ಆರೋಪಿಸಿದೆ.

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ, ಸಾಹು ಅವರ ವಿರುದ್ಧ ಕಿಡಿಕಾಡಿದೆ. ಜತೆಗೆ ಘಟನೆಯ ಬಗ್ಗೆ ಸ್ಪಷ್ಟನೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್‌ ಶಾ ಅವರನ್ನು ಆಗ್ರಹಿಸಿದೆ. 

ಕ್ಷಮೆಯಾಚನೆ: ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆಯೇ ಸಾಹು ಈ ಬಗ್ಗೆ ಕ್ಷಮೆ ಕೇಳಿದ್ದಾರೆ. ಜತೆಗೆ ಮತ್ತೊಂದು ವಿಡಿಯೊ ಬಿಡುಗಡೆಗೊಳಿ,‘ರಾಜಕೀಯ ಲಾಭಕ್ಕಾಗಿ ವಿರೋಧಿಗಳು ನನ್ನ ಹೇಳಿಕೆಯನ್ನು ತಿರುಚಿದ್ದಾರೆ. ನನ್ನ ಸ್ನೇಹಿತನ ಮದುವೆಗೆ ಸಂಬಂಧಿಸಿದ ಕಥೆಯನ್ನು ನಾನು ಹೇಳುತ್ತಿದ್ದೆ ಅಷ್ಟೇ’ ಎಂದು ವಿಡಿಯೊದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ ನಾಯಕರಿಂದಲೂ ತರಾಟೆ: ಸಾಹು ಹೇಳಿಕೆ ಕುರಿತಂತೆ ಬಿಹಾರದ ಬಿಜೆಪಿ ನಾಯಕರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯ ಘಟಕ ಕೂಡ ಘಟನೆಯನ್ನು ಖಂಡಿಸಿದೆ. ಇದೇ ವೇಳೆ ಸಾಹು ಅವರಿಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲವೆಂದು ತಿಳಿಸಿ, ಅಂತರ ಕಾಯ್ದುಕೊಂಡಿದೆ.  

ಬಿಹಾರದಲ್ಲೂ ಭಾರಿ ಆಕ್ಷೇಪ

ಸಾಹು ಹೇಳಿಕೆ ಬಗ್ಗೆ ಬಿಹಾರದಲ್ಲಿ ರಾಜಕೀಯ ನಾಯಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕರಾದ ದಿಲೀಪ್‌ ಜೈಸ್ವಾಲ್‌ ಮಾತನಾಡಿ ‘ಇಂಥ ಭಾಷೆ ಬಳಸುವ ವ್ಯಕ್ತಿ ಯಾರೊಬ್ಬರ ಪತಿಯೋ ಮಗನು ಆಗಿರುವುದಿಲ್ಲ. ಇದು ತಪ್ಪಾದ ನಡೆ ಇದನ್ನು ಖಂಡಿಸಲೇಬೇಕು’ ಎಂದಿದ್ದಾರೆ. 

ಆರ್‌ಜೆಡಿ ಮಹಿಳಾ ಘಟಕವು ಶನಿವಾರ ಪ್ರತಿಭಟನೆ ನಡೆಸಿ ಬಿಜೆಪಿಯ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದೆ. ಆರ್‌ಜೆಡಿ ವಕ್ತಾರೆ ಸಾರಿಕಾ ಪಾಸ್ವಾನ್‌ ಮಾತನಾಡಿ ‘ ಬಿಹಾರದ ಎಲ್ಲಾ  ಹೆಣ್ಣುಮಕ್ಕಳನ್ನು ಸಾಹು ಅವಮಾನಿಸಿದ್ದಾರೆ. ಬೇರೆ ಯಾರೂ ಇಂಥ ಪದ ಬಳುಸುವ ಧೈರ್ಯ ಮಾಡಬಾರದು ಅಂತಹ ಕ್ರಮವನ್ನು ಸಾಹು ವಿರುದ್ಧ ಬಿಜೆಪಿ ಅನುಸರಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಏತನ್ಮಧ್ಯೆ ಮುಜಾಫರ್‌ಪುರದ ಎಸಿಜೆಎಂ ಕೋರ್ಟ್‌ನಲ್ಲಿ ಸಾಹು ವಿರುದ್ಧ ಕ್ರಿಮಿನಲ್‌ ಮೊಕದ್ಧಮೆ ದಾಖಲಾಗಿದೆ. ಜ.12ರಂದು ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.