ADVERTISEMENT

ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣ: ಕಡತ ಕೋರ್ಟ್‌ಗೆ ನೀಡಲು ಗುಜರಾತ್‌ ಹಿಂದೇಟು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2023, 3:01 IST
Last Updated 19 ಏಪ್ರಿಲ್ 2023, 3:01 IST
   

ನವದೆಹಲಿ: ‘ಬಿಲ್ಕಿಸ್‌ ಬಾನು ಪ್ರಕರಣದ 11 ಅಪರಾಧಿಗಳಿಗೆ ಅವಧಿಪೂರ್ವ ಬಿಡುಗಡೆಗೆ ಮಂಜೂರಾತಿ ನೀಡಿರುವುದಕ್ಕೆ ಸಂಬಂಧಿಸಿದ ಕಡತಗಳ ಮೇಲೆ ತಮಗೇ ವಿಶೇಷಾಧಿಕಾರ ಇದೆ’ ಎಂದು ಕೇಂದ್ರ ಹಾಗೂ ಗುಜರಾತ್‌ ಸರ್ಕಾರಗಳು ಸುಪ್ರೀಂಕೋರ್ಟ್‌ಗೆ ಮಂಗಳವಾರ ತಿಳಿಸಿದವು.

ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದ ಅಪರಾಧಿಗಳ ಅವಧಿಪೂರ್ವ ಬಿಡುಗಡೆ ಪ್ರಶ್ನಿಸಿ ಬಿಲ್ಕಿಸ್‌ ಬಾನು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ಉಭಯ ಸರ್ಕಾರಗಳು ಈ ಪ್ರತಿಪಾದನೆ ಮಾಡಿದವು.

ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್‌ ಹಾಗೂ ಬಿ.ವಿ.ನಾಗರತ್ನ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು.

ADVERTISEMENT

‘ಅಪರಾಧಿಗಳನ್ನು ಬಿಡುಗಡೆಗೊಳಿಸಿರುವುದಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಪೀಠಕ್ಕೆ ಸಲ್ಲಿಸಬೇಕು’ ಎಂದು ಮಾರ್ಚ್‌ 27ರಂದು ನ್ಯಾಯಪೀಠ ಆದೇಶಿಸಿತ್ತು.

ಆದೇಶ ಕುರಿತು ಪ್ರಸ್ತಾಪಿಸಿದ ಉಭಯ ಸರ್ಕಾರಗಳು, ‘ಈ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗುವುದು‘ ಎಂದು ನ್ಯಾಯಪೀಠಕ್ಕೆ ತಿಳಿಸಿದವು.

‘ಅಪರಾಧ ಕೃತ್ಯವು ಘೋರ ಹಾಗೂ ಭಯಾನಕವಾಗಿದೆ. ಹೀಗಾಗಿ ಅಪರಾಧಿಗಳ ಅವಧಿಪೂರ್ವ ಬಿಡುಗಡೆಗೆ ಅನುಮತಿ ನೀಡುವ ಮುನ್ನ ರಾಜ್ಯ ಸರ್ಕಾರ ವಿವೇಕಯುತವಾಗಿ ನಡೆದುಕೊಳ್ಳಬೇಕಿತ್ತು’ ಎಂದು ನ್ಯಾಯಪೀಠ ಹೇಳಿತು.

‘ಅವಧಿಪೂರ್ವ ಬಿಡುಗಡೆಗೆ ಅನುಮತಿ ನೀಡಿದ್ದಕ್ಕೆ ಸಂಬಂಧಿಸಿದ ಕಡತಗಳನ್ನು ಕೋರ್ಟ್‌ ಮುಂದೆ ಹಾಜರುಪಡಿಸಲು ಹೆದರಿಕೆ ಏಕೆ’ ಎಂದು ಪ್ರಶ್ನಿಸಿತು.

‘ಸರ್ಕಾರ ವಿವೇಕ ಬಳಸಿದೆಯೇ ಎಂಬುದು ಇಲ್ಲಿರುವ ಪ್ರಶ್ನೆ. ತನ್ನ ನಿರ್ಧಾರಕ್ಕೆ ಕಾರಣವಾದ ಅಂಶಗಳು ಯಾವವು? ಅಪರಾಧಿಗಳು ತಮ್ಮ ಜೀವಿತಾವಧಿ ವರೆಗೆ ಜೈಲಿನಲ್ಲಿರಬೇಕು ಎಂಬ ಆದೇಶವಿತ್ತು. ಆದಾಗ್ಯೂ, ಸರ್ಕಾರದ ಆದೇಶವೊಂದರ ಆಧಾರದ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ’ ಎಂದು ನ್ಯಾಯಪೀಠ ಹೇಳಿತು.

‘ಇವತ್ತು ಬಿಲ್ಕಿಸ್‌ ಬಾನು ಅವರಿಗೆ ಹೀಗಾಗಿದ್ದರೆ, ನಾಳೆ ಯಾರಿಗೂ ಹೀಗಾಬಹುದು. ಇಂಥ ಪರಿಸ್ಥಿತಿ ನನಗೆ ಬಂದೊದಗಬಹುದು ಅಥವಾ ನೀವು ಎದುರಿಸಬಹುದು. ಹೀಗಾಗಿ, ಅವಧಿಪೂರ್ವ ಬಿಡುಗಡೆಗೆ ನಿರ್ಧಾರ ಕೈಗೊಳ್ಳಲು ನಿಮಗಿದ್ದ ಕಾರಣಗಳನ್ನು ಹೇಳದಿದ್ದರೆ, ನಾವು ನಮ್ಮದೇ ಆದ ನಿರ್ಣಯಗಳಿಗೆ ಬರಬೇಕಾಗುತ್ತದೆ’ ಎಂದು ನ್ಯಾಯಪೀಠ ಹೇಳಿತು.

ಕೇಂದ್ರ ಸರ್ಕಾರ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಎಸ್‌.ವಿ.ರಾಜು, ‘ಸಂಬಂಧಪಟ್ಟ ಕಡತಗಳು ಮಂಗಳವಾರವಷ್ಟೆ ನನ್ನ ಕೈಸೇರಿವೆ. ಕಡತಗಳನ್ನು ಪರಿಶೀಲಿಸಿ, ಮುಂದಿನ ವಾರ ವಾದ ಮಂಡಿಸುವೆ’ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

‘ಸಾಮಾನ್ಯ ಪ್ರಕರಣಗಳಲ್ಲಿ, ಅಪರಾಧಿಗಳ ಅವಧಿಪೂರ್ವ ಬಿಡುಗಡೆಗೆ ಸಂಬಂಧಿಸಿ ನೀಡುವ ಮಂಜೂರಾತಿಗಳನ್ನು ನ್ಯಾಯಿಕ ಪರಿಶೀಲನೆಗೆ ಒಳಪಡಿಸುವುದಿಲ್ಲ. ನೀವು ಈ ಕಾನೂನು ಕ್ರಮವನ್ನು ಸಮರ್ಪಕವಾಗಿಯೇ ತೆಗೆದುಕೊಂಡಿದ್ದೀರಿ. ಇಲ್ಲಿ ಹೆದರಿಕೊಳ್ಳುವಂಥದ್ದು ಏನೂ ಇಲ್ಲ’ ಎಂದು ರಾಜು ಅವರಿಗೆ ನ್ಯಾಯಪೀಠ ಹೇಳಿತು.

‘ಈ ಕಡತಗಳ ಮೇಲೆ ಅಧಿಕಾರ ಇದೆ. ಕಡತಗಳನ್ನು ಹಾಜರುಪಡಿಸುವ ಕುರಿತು ನೀಡಿರುವ ಆದೇಶವನ್ನು ಮರುಪರಿಶೀಲಿಸಬೇಕು ಎಂದಷ್ಟೆ ನಿಮ್ಮ ಗಮನಕ್ಕೆ ತರುತ್ತಿದ್ದೇವೆ’ ಎಂದು ರಾಜು ಹೇಳಿದರು.

‘ನೀವು ಕಡತಗಳನ್ನು ನಮಗೆ ತೋರಿಸಿದರೆ ಒಳ್ಳೆಯದು' ಎಂದ ನ್ಯಾಯಪೀಠ, ‘ಮರುಪರಿಶೀಲನಾ ಅರ್ಜಿ ಸಲ್ಲಿಸದಂತೆ ನಾವು ಸರ್ಕಾರವನ್ನು ತಡೆದಿಲ್ಲ’ ಎಂದು ಹೇಳಿತು. ವಿಚಾರಣೆಯನ್ನು ಮೇ 2ಕ್ಕೆ ಮುಂದೂಡಿತು.

ಹೋಲಿಕೆ ಸಲ್ಲ
‘ಸೇಬು ಹಣ್ಣುಗಳನ್ನು ಕಿತ್ತಳೆ ಹಣ್ಣುಗಳೊಂದಿಗೆ ಹೋಲಿಕೆ ಮಾಡುವುದು ಸಾಧ್ಯ ಇಲ್ಲ. ಹಾಗೆಯೇ, ಒಂದು ಕೊಲೆ ಪ್ರಕರಣದೊಂದಿಗೆ ಸಾಮೂಹಿಕ ಹತ್ಯೆಯನ್ನು ಹೋಲಿಸಲಾಗದು. ಈ ಪ್ರಕರಣದಲ್ಲಿ, ಒಬ್ಬ ಗರ್ಭಿಣಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಹಲವು ಜನರನ್ನು ಹತ್ಯೆ ಮಾಡಲಾಗಿದೆ’ ಎಂದು ನ್ಯಾಯಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.