ADVERTISEMENT

ಬಿರ್‌ಭೂಮ್‌ ಪ್ರಕರಣದಲ್ಲಿ ಮೊದಲ ಬಂಧನ: ಮುಂಬೈನಲ್ಲಿ ನಾಲ್ವರ ಸೆರೆ

ಪಿಟಿಐ
Published 7 ಏಪ್ರಿಲ್ 2022, 14:56 IST
Last Updated 7 ಏಪ್ರಿಲ್ 2022, 14:56 IST
   

ಮುಂಬೈ: ಬಿರ್‌ಭೂಮ್‌ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಸಿಬಿಐ ಅಧಿಕಾರಿಗಳು ಪಶ್ಚಿಮ ಬಂಗಾಳದ ನಾಲ್ವರನ್ನು ಮುಂಬೈನಲ್ಲಿ ಗುರುವಾರ ಬಂಧಿಸಿದ್ದಾರೆ.

ಮಾರ್ಚ್ 21 ರಂದು ಬಿರ್‌ಭೂಮ್‌ ಬೊಗ್‌ತುಯಿ ಗ್ರಾಮದಲ್ಲಿ ನಡೆದ ಹತ್ಯೆಗಳ ತನಿಖೆಯನ್ನು ಕಲ್ಕತ್ತಾ ಹೈಕೋರ್ಟ್‌ ಸಿಬಿಐಗೆ ವಹಿಸಿತ್ತು. ಇದಾದ ನಂತರ, ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಆಗುತ್ತಿರುವ ಬಂಧನವಿದು.

ಹತ್ಯೆಯ ನಂತರ ನಾಲ್ವರು ಆರೋಪಿಗಳು ಬೊಗ್‌ತುಯಿಯಿಂದ ಮಹಾರಾಷ್ಟ್ರದ ರಾಜಧಾನಿ ಮುಂಬೈಗೆ ಪಲಾಯನಗೊಂಡಿದ್ದರು. ಗುರುವಾರ ಮುಂಜಾನೆ ಅವರ ಅಡಗುತಾಣವನ್ನು ಪತ್ತೆ ಹಚ್ಚುವಲ್ಲಿ ಸಿಬಿಐ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ADVERTISEMENT


‘ನಾಲ್ವರು ಬಂಧಿತ ಆರೋಪಿಗಳ ಪೈಕಿ ಇಬ್ಬರನ್ನು ಬಪ್ಪಾ ಮತ್ತು ಶಾಬು ಶೇಖ್ ಎಂದು ಗುರುತಿಸಲಾಗಿದೆ. ಇವರ ಹೆಸರುಗಳು ಎಫ್‌ಐಆರ್‌ನಲ್ಲಿಯೂ ಉಲ್ಲೇಖವಾಗಿವೆ. ನಾವು ಅವರನ್ನು ಮುಂಬೈನ ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ. ನಂತರ, ಪಶ್ಚಿಮ ಬಂಗಾಳಕ್ಕೆ ಕರೆದೊಯ್ಯಲು ಮನವಿ ಸಲ್ಲಿಸುತ್ತೇವೆ’ ಎಂದು ಅಧಿಕಾರಿ ತಿಳಿಸಿದ್ದಾರೆ.

ಸ್ಥಳೀಯ ಟಿಎಂಸಿ ನಾಯಕ ಭಾದು ಶೇಖ್ ಹತ್ಯೆಯ ನಂತರ ಗ್ರಾಮದ ಹಲವಾರು ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಘಟನೆಯಲ್ಲಿ ಎಂಟು ಜನ ಸಜೀವ ದಹನಗೊಂಡಿದ್ದರೆ, ಮತ್ತೊಬ್ಬರು ತೀವ್ರಗಾಯಗಳಿಂದ ಕೊನೆಯುಸಿರೆಳೆದಿದ್ದರು.

ಈ ಹಿಂದೆ ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡ ಪ್ರಕರಣದ ತನಿಖೆ ನಡೆಸುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.