ADVERTISEMENT

ಬಿರ್‌ಭೂಮ್‌ ಹತ್ಯೆ: ಕೊಲೆಯಾದ ಟಿಎಂಸಿ ಮುಖಂಡನ ಮಕ್ಕಳು ಸೇರಿ 22 ಮಂದಿ ಬಂಧನ

ಪಿಟಿಐ
Published 23 ಮಾರ್ಚ್ 2022, 10:06 IST
Last Updated 23 ಮಾರ್ಚ್ 2022, 10:06 IST
ಪಶ್ಚಿಮ ಬಂಗಾಳದ ಸಚಿವರು ಮತ್ತು ಕೋಲ್ಕತ್ತ ಮೇಯರ್‌ ಫಿರಹಾದ್‌ ಹಕೀಮ್‌ ಅವರು ಮಂಗಳವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಪಿಟಿಐ ಚಿತ್ರ
ಪಶ್ಚಿಮ ಬಂಗಾಳದ ಸಚಿವರು ಮತ್ತು ಕೋಲ್ಕತ್ತ ಮೇಯರ್‌ ಫಿರಹಾದ್‌ ಹಕೀಮ್‌ ಅವರು ಮಂಗಳವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಪಿಟಿಐ ಚಿತ್ರ   

ಕೋಲ್ಕತ್ತ: ಬಿರ್‌ಭೂಮ್‌ ಜಿಲ್ಲೆಯ ರಾಮ್‌ಪುರಹಾಟ್‌ ಎಂಬಲ್ಲಿ ಮಂಗಳವಾರ ನಡೆದ ಹಿಂಸಾಕೃತ್ಯಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಘಟನೆ ಸಂಭವಿಸಿದ ದಿನ 11 ಮಂದಿಯನ್ನು ಬಂಧಿಸಲಾಗಿತ್ತು.

8 ಮಂದಿ ಜೀವಂತವಾಗಿ ಸುಟ್ಟುಹೋದ ಘಟನೆಗೆ ಸಂಬಂಧಿಸಿ ಇದುವರೆಗೆ ಕನಿಷ್ಠ 22 ಮಂದಿಯನ್ನು ಬಂಧಿಸಲಾಗಿದೆ ಎಂದು ಬುಧವಾರ ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಸೋಮವಾರ ಕೊಲೆಯಾದ ಬರ್ಶಾಲ್‌ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭದು ಶೇಕ್‌ ಎಂಬುವವರ ಕುಟುಂಬ ಸದಸ್ಯರು ಪ್ರತೀಕಾರದ ಭಾಗವಾಗಿ ದಾಳಿ ನಡೆಸಿದ್ದಾರೆ. ರಾಮ್‌ಪುರಹಾಟ್‌ ನಗರದ ಹೊರವಲಯದಲ್ಲಿರುವ ಬೊಗ್‌ತುಯಿ ಗ್ರಾಮದ 10 ಮನೆಗಳ ಮೇಲೆ ಪೆಟ್ರೋಲ್‌ ಬಾಂಬ್‌ ಎಸೆದಿದ್ದಾರೆ ಎಂದು ಆರೋಪ ಕೇಳಿಬಂದಿದೆ.

ADVERTISEMENT

ಬಂಧಿತರ ಪೈಕಿ ಭದು ಶೇಕ್‌ ಅವರ ಮಕ್ಕಳು ಸೇರಿದ್ದಾರೆ ಎನ್ನಲಾಗಿದೆ. ಆದರೆ ಪೊಲೀಸರು ಇದುವರೆಗೆ ಬಂಧಿತ ಆರೋಪಿಗಳ ಹೆಸರನ್ನು ಬಹಿರಂಗಪಡಿಸಿಲ್ಲ.

ಮಂಗಳವಾರ ನಸುಕಿನ ವೇಳೆ ನಡೆದ ಪೆಟ್ರೋಲ್‌ ಬಾಂಬ್‌ ದಾಳಿಯಲ್ಲಿ ಹತ್ತಕ್ಕೂ ಹೆಚ್ಚು ಮನೆಗಳು ಬೆಂಕಿಗೆ ಆಹುತಿಯಾಗಿದ್ದು, ಇಬ್ಬರು ಮಕ್ಕಳು ಸೇರಿದಂತೆ ಎಂಟು ಮಂದಿ ಜೀವಂತವಾಗಿ ಸುಟ್ಟುಹೋಗಿದ್ದಾರೆ.

ಘಟನೆಯನ್ನು ವಿರೋಧಿಸಿ ಎಡ ಪಕ್ಷಗಳು ರಾಮ್‌ಪುರಹಾಟ್‌ನಲ್ಲಿ ಪ್ರತಿಭಟನೆ ನಡೆಸಿವೆ. ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.