ADVERTISEMENT

ಥಾಣೆಯಲ್ಲಿ ಕೋಳಿಗಳ ಸಾವು: ಪರೀಕ್ಷೆಯಲ್ಲಿ ಹಕ್ಕಿ ಜ್ವರ ಪತ್ತೆ

ಪಿಟಿಐ
Published 17 ಫೆಬ್ರುವರಿ 2022, 16:12 IST
Last Updated 17 ಫೆಬ್ರುವರಿ 2022, 16:12 IST
ಐಸ್ಟಾಕ್ ಚಿತ್ರ
ಐಸ್ಟಾಕ್ ಚಿತ್ರ   

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ. ಇತ್ತೀಚೆಗೆ ಶಹಾಪುರದ ಕೋಳಿ ಫಾರಂನಲ್ಲಿ ಸುಮಾರು 100 ಕೋಳಿಗಳು ಸಾವಿಗೀಡಾಗಿದ್ದವು. ಪ್ರಯೋಗಾಲಯದ ಪರೀಕ್ಷೆಯಲ್ಲಿ ಅವುಗಳಿಗೆ ಹಕ್ಕಿ ಜ್ವರ ತಗುಲಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

‘ಇತ್ತೀಚೆಗೆ ಶಹಾಪುರ ತಹಸಿಲ್‌ನ ವೆಹ್ಲೋಲಿ ಗ್ರಾಮದ ಕೋಳಿ ಫಾರಂನಲ್ಲಿ ಸುಮಾರು 100 ಕೋಳಿಗಳು ಸಾವನ್ನಪ್ಪಿದ್ದವು. ಅವುಗಳ ಮಾದರಿಗಳನ್ನು ಪರೀಕ್ಷೆಗಾಗಿ ಪುಣೆ ಮೂಲದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈಗ ಬಂದಿರುವ ವರದಿಯಲ್ಲಿ ಕೋಳಿಗಳು ಎಚ್5ಎನ್1ನಿಂದ ಸಾವಿಗೀಡಾಗಿವೆ ಎಂದು ದೃಢಪಟ್ಟಿದೆ’ಎಂದು ಥಾಣೆಯ ಜಿಲ್ಲಾ ಪರಿಷತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಡಾ.ಬಾವುಸಾಹೇಬ್ ದಂಗಡೆ ತಿಳಿಸಿದ್ದಾರೆ.

ವರದಿ ಬಂದ ಬಳಿಕ' ಹಕ್ಕಿ ಜ್ವರದಿಂದ ಕೋಳಿಗಳು ಮೃತಪಟ್ಟ ಫಾರ್ಮ್‌ನ ಒಂದು ಕಿಮೀ ಪ್ರದೇಶದ ಕೋಳಿ ಫಾರಂಗಳಲ್ಲಿ ಸಾಕುತ್ತಿದ್ದ ಸುಮಾರು 25,000 ಕೋಳಿಗಳನ್ನು ಮುಂದಿನ ಒಂದೆರಡು ದಿನಗಳಲ್ಲಿ ನಾಶಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ. ಜಿಲ್ಲೆಯ ಪಶುಸಂಗೋಪನಾ ಇಲಾಖೆಯು ಇತರ ಪಕ್ಷಿಗಳಿಗೆ ಸೋಂಕು ಹರಡದಂತೆ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ದಂಗಡೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.