ADVERTISEMENT

ಹಕ್ಕಿ ಜ್ವರ ಭೀತಿ: ಪಕ್ಷಿಗಳ ಆಮದು ನಿಷೇಧಿಸಿದ ದೆಹಲಿ ಸರ್ಕಾರ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 12:20 IST
Last Updated 9 ಜನವರಿ 2021, 12:20 IST
ನವದೆಹಲಿಯ ಮಯೂರವಿಹಾರ್‌ ಪ್ರದೇಶದ ಉದ್ಯಾನದಲ್ಲಿ ಸತ್ತು ಬಿದ್ದಿರುವ ಕಾಗೆಗಳು (ಸಂಗ್ರಹ ಚಿತ್ರ)  –ಪಿಟಿಐ ಚಿತ್ರ
ನವದೆಹಲಿಯ ಮಯೂರವಿಹಾರ್‌ ಪ್ರದೇಶದ ಉದ್ಯಾನದಲ್ಲಿ ಸತ್ತು ಬಿದ್ದಿರುವ ಕಾಗೆಗಳು (ಸಂಗ್ರಹ ಚಿತ್ರ)  –ಪಿಟಿಐ ಚಿತ್ರ   

ನವದೆಹಲಿ: ಹಕ್ಕಿಜ್ವರ ಪ್ರಸರಣವಾಗುವ ಭೀತಿಯಿಂದ, ಬೇರೆ ರಾಜ್ಯಗಳಿಂದ ಹಕ್ಕಿಗಳನ್ನು ತರಿಸಿಕೊಳ್ಳುವುದನ್ನು ನಿಷೇಧಿಸಿ ದೆಹಲಿ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.

ಗಾಜಿಪುರದಲ್ಲಿರುವ ಪೌಲ್ಟ್ರಿ ಮಾರುಕಟ್ಟೆಯನ್ನು ಸಹ 10 ದಿನಗಳ ಕಾಲ ಬಂದ್‌ ಮಾಡಲು ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ತಿಳಿಸಿದರು.

ನಗರದಲ್ಲಿ ಕಳೆದ ಮೂರು ದಿನಗಳಲ್ಲಿ 24 ಕಾಗೆಗಳು, 10 ಬಾತುಕೋಳಿಗಳು ಸತ್ತಿವೆ. ಹೀಗಾಗಿ ರಾಜ್ಯ ಸರ್ಕಾರ ಈ ಎರಡು ತುರ್ತು ಕ್ರಮಗಳನ್ನು ಕೈಗೊಂಡಿದೆ.

ADVERTISEMENT

‘ನಗರದಲ್ಲಿ ಹಕ್ಕಿಜ್ವರ ಪ್ರಕರಣಗಳು ವರದಿಯಾಗಿಲ್ಲ. ಈ ಕುರಿತು ಜನರಲ್ಲಿ ಆತಂಕ ಬೇಡ. ಹಕ್ಕಿಜ್ವರ ಪ್ರಸರಣ ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿಗಳ ಪ್ರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ’ ಎಂದೂ ಅವರು ಹೇಳಿದರು.

‘ಜಲಂಧರ್‌ನಲ್ಲಿರುವ ಪ್ರಯೋಗಾಲಯಕ್ಕೆ 104 ಮಾದರಿಗಳನ್ನು ಕಳಿಸಲಾಗಿದ್ದು, ಸೋಮವಾರ (ಜ.11) ವರದಿ ಕೈಸೇರುವುದು’ ಎಂದರು.

ಕ್ಚಿಪ್ರವಾಗಿ ಕ್ರಮಗೊಳ್ಳಲು ಹಾಗೂ ಕಣ್ಗಾವಲಿಗಾಗಿ ಎಲ್ಲ ಜಿಲ್ಲಾ ಆಡಳಿತಗಳಿಗೆ ಸೂಚನೆ ನೀಡಲಾಗಿದೆ. ಹಕ್ಕಿಗಳ ಮಾರುಕಟ್ಟೆ, ಕೋಳಿ ಸಾಕಣೆ ಕೇಂದ್ರಗಳನ್ನು ಪರಿಶೀಲಿಸುವಂತೆ ಪಶುವೈದ್ಯರಿಗೆ ನಿರ್ದೇಶನ ನೀಡಲಾಗಿದೆ. 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿ (011–23890318) ಸ್ಥಾಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.