ADVERTISEMENT

ಹಕ್ಕಿ ಜ್ವರ ಹರಡುವ ಭೀತಿ; ಹಲವು ರಾಜ್ಯಗಳಲ್ಲಿ ಕಟ್ಟೆಚ್ಚರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜನವರಿ 2021, 3:37 IST
Last Updated 6 ಜನವರಿ 2021, 3:37 IST
   

ನವದೆಹಲಿ: ಇಡೀ ದೇಶವೇ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ನಡುವೆಯೇ, ಹಕ್ಕಿ ಜ್ವರ ಕಾಣಿಸಿಕೊಂಡಿರುವುದು ಭೀತಿಯನ್ನು ಹೆಚ್ಚಿಸಿದೆ. ಈಗಾಗಲೇ ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲಪ್ರದೇಶ ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಸಾವಿರಾರು ಪಕ್ಷಿಗಳು ಸಾವನ್ನಪ್ಪಿವೆ.

ಇಂದೋರ್ ಸೇರಿದಂತೆ ರಾಜ್ಯದ ಪಶ್ವಿಮ ಭಾಗಗಳಲ್ಲಿ ಕಾಗೆಗಳು ಹಠಾತ್ತನೆ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಲ್ಲಿ ಹಕ್ಕಿ ಜ್ವರ ವಿಪತ್ತನ್ನು ಘೋಷಿಸಲಾಗಿದೆ. ಕೇರಳದಲ್ಲೂ ರಾಜ್ಯ ವಿಪತ್ತು ಘೋಷಿಸಲಾಗಿದೆ.

ಮಧ್ಯ ಪ್ರದೇಶದಲ್ಲಿ 376ಕ್ಕೂ ಹೆಚ್ಚು ಕಾಗೆಗಳು ಸಾವನ್ನಪ್ಪಿವೆ. ಸತ್ತ ಕಾಗೆಗಳ ಮಾದರಿ ಪರೀಕ್ಷೆಯಲ್ಲಿ H5N8 ವೈರಸ್ ಪತ್ತೆ ಹಚ್ಚಲಾಗಿದೆ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯೂರಿಟಿ ಅನಿಮಲ್ ಡಿಸೀಸ್ (ಎನ್‌ಐಎಚ್‌ಎಸ್‌ಎಡಿ) ವರದಿ ಮಾಡಿದೆ.

ADVERTISEMENT

ಕಾಗೆಗಳ ಹಠಾತ್ ಸಾವಿನ ಪ್ರಕರಣ ಹಿನ್ನೆಲೆಯಲ್ಲಿ ಇಂದೋರ್‌ನಲ್ಲಿ ಕ್ಷಿಪ್ರ ಕಂಟ್ರೋಲ್ ರೂಮ್ ತೆರೆಯಲಾಗಿದೆ. ಅಲ್ಲದೆ ತ್ವರಿತವಾಗಿ ವರದಿ ನೀಡುವಂತೆ ಆಯಾ ಜಿಲ್ಲೆಗಳಜಿಲ್ಲಾಧಿಕಾರಿಗಳಿಗೆ ಪಶುಸಂಗೋಪನಾ ಇಲಾಖೆ ನಿರ್ದೇಶನ ನೀಡಿದೆ.

ರಾಜಸ್ಥಾನದಲ್ಲೂ 600ಕ್ಕೂ ಹೆಚ್ಚು ಹಕ್ಕಿಗಳು ಸಾವನ್ನಪ್ಪಿವೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ರವಾನಿಸಲಾಗಿದೆ. ಹಿಮಾಚಲ ಪ್ರದೇಶದಲ್ಲಿ ಪಾಂಗ್ ಅಣೆಕಟ್ಟು ನದಿಯ ಸುತ್ತು ಮುತ್ತ ಅಳಿವಿನ ಅಂಚಿನಲ್ಲಿರುವ ಪ್ರಭೇದಗಳು ಸೇರಿದಂತೆ 2000ಕ್ಕೂ ಹೆಚ್ಚು ವಲಸೆ ಹಕ್ಕಿಗಳು ಸಾವನ್ನಪ್ಪಿವೆ.

ಕೇಂದ್ರ ಸರ್ಕಾರ ಎಚ್ಚರಿಕೆ:
ಹಿಮಾಚಲ ಪ್ರದೇಶ, ರಾಜಸ್ಥಾನ, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಚ್ಚರಿಕೆಯನ್ನು ರವಾನಿಸಿದೆ. ಮಾನವರು ಸೇರಿದಂತೆ ಇತರೆ ಪ್ರಾಣಿ-ಪಕ್ಷಿಗಳಿಗೂ ಹಕ್ಕಿ ಜ್ವರ ಹರಡುವ ಭೀತಿಯಿದೆ ಎಂದು ತಿಳಿಸಿದೆ.

ಕಳೆದ ಕೆಲವು ದಿನಗಳಲ್ಲಿ ಸಾವಿರಾರು ಹಕ್ಕಿಗಳು ಸಾವನ್ನಪ್ಪಿವೆ. ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ಕ್ರಮ ಕೈಗೊಳ್ಳುವಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಎಚ್ಚರಿಕೆ ರವಾನಿಸಿದೆ.

ಕೇರಳದಲ್ಲಿ ಕೋಳಿ, ಬಾತುಕೋಳಿಗಳು ಸೇರಿದಂತೆ 21000ಕ್ಕೂ ಹೆಚ್ಚು ಹಕ್ಕಿಗಳು ಸಾವನ್ನಪ್ಪಿವೆ. ಆಲಪ್ಪುಳ ಜಿಲ್ಲೆಯಲ್ಲಿ ಹಕ್ಕಿ ಜ್ವರ ಅತಿ ಹೆಚ್ಚು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮಾಂಸ, ಮೀನು ಹಾಗೂ ಮೊಟ್ಟೆಗಳ ಮಾರಾಟ ಹಾಗೂ ಬಳಕೆಗೆ ನಿಷೇಧಕ್ಕೆ ಆದೇಶ ಹೊರಡಿಸಲಾಗಿದೆ.

ರಾಜ್ಯದಲ್ಲೂ ಕಟ್ಟೆಚ್ಚರ:
ಕೇರಳದಲ್ಲಿ ಹಕ್ಕಿ ಜ್ವರ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡು ಹಾಗೂ ಕರ್ನಾಟಕ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ. ಹಕ್ಕಿಗಳನ್ನು ಸಾಗಿಸುವ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.

ಪ್ರಮುಖವಾಗಿಯೂ ಮೈಸೂರು, ಚಾಮರಾಜನಗರ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುನ್ನೆಚ್ಚೆರಿಕೆ ಕ್ರಮ ಕೈಗೊಳ್ಳುವಂತೆ ಪಶುಸಂಗೋಪನಾ ಇಲಾಖೆ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.