ADVERTISEMENT

ಮಗನಿಗೆ ಟಿಕೆಟ್‌ ರಾಜೀನಾಮೆಗೆ ಮುಂದಾದ ಸಚಿವ

ಪುತ್ರನಿಗೆ ಟಿಕೆಟ್‌; ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಸಂದೇಶ ಸಾರಲು ಈ ನಿರ್ಧಾರ

ಪಿಟಿಐ
Published 14 ಏಪ್ರಿಲ್ 2019, 18:54 IST
Last Updated 14 ಏಪ್ರಿಲ್ 2019, 18:54 IST
ಬೀರೇಂದರ್‌ ಸಿಂಗ್
ಬೀರೇಂದರ್‌ ಸಿಂಗ್   

ನವದೆಹಲಿ: ಹರಿಯಾಣದಲ್ಲಿ ಜಾಟ್ ಸಮುದಾಯದ ಪ್ರಭಾವಿ ನಾಯಕ, ಕೇಂದ್ರ ಉಕ್ಕು ಸಚಿವ ಚೌಧರಿ ಬೀರೇಂದ್ರ ಸಿಂಗ್‌ ಅವರು ಸಚಿವ ಸ್ಥಾನ ಹಾಗೂ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ತಮ್ಮ ಪುತ್ರನಿಗೆ ಹಿಸ್ಸಾರ್ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಕ್ಕಿದೆ. ಹೀಗಾಗಿ ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಸಂದೇಶ ರವಾನಿಸಲು ಈ ನಿರ್ಧಾರಕ್ಕೆ ಬಂದಿದ್ದಾಗಿ ಅವರು ಹೇಳಿದ್ದಾರೆ.

ಪುತ್ರನಿಗೆ ಟಿಕೆಟ್ ಸಿಕ್ಕ ವಿಷಯ ತಿಳಿಯುತ್ತಿದ್ದಂತೆ ಅವರು ಸುದ್ದಿಗೋಷ್ಠಿ ಕರೆದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ತಮ್ಮ ನಿರ್ಧಾರವನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಗಮನಕ್ಕೆ ತಂದಿದ್ದು, ಅಂತಿಮ ನಿರ್ಧಾರ ಅವರಿಗೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ.

ವಂಶಾಡಳಿತವನ್ನು ಬಿಜೆಪಿ ಸಿದ್ಧಾಂತ ವಿರೋಧಿಸುತ್ತದೆ. ತಾವು ತೆಗೆದುಕೊಂಡ ನಿರ್ಧಾರ ಪಕ್ಷದ ಸಿದ್ಧಾಂತದ ಪ್ರಕಾರವಾಗಿಯೇ ಇದೆ ಎಂದು ತಿಳಿಸಿದ್ದಾರೆ.

ADVERTISEMENT

ಇವರ ಪತ್ನಿ ಹರಿಯಾಣದ ಶಾಸಕಿ. ಪುತ್ರ ಬ್ರಿಜೇಂದ್ರ ಸಿಂಗ್ ಅವರು ಐಎಎಸ್ ಅಧಿಕಾರಿ. ಇವರಿಗೆ ಹಿಸ್ಸಾರ್ ಕ್ಷೇತ್ರದ ಟಿಕೆಟ್ ಘೋಷಣೆಯಾಗಿದೆ.

ಕಾಂಗ್ರೆಸ್‌ನೊಂದಿಗಿನ ತಮ್ಮ ನಾಲ್ಕು ದಶಕಗಳ ಒಡನಾಟವನ್ನು ತೊರೆದ ಬೀರೇಂದ್ರ, 2014ರಲ್ಲಿ ಬಿಜೆಪಿ ಸೇರಿದ್ದರು. ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅವರು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್‌ ಖಾತೆ ಸಚಿವರಾಗಿದ್ದರು. 2016ರಲ್ಲಿ ಅವರನ್ನು ಉಕ್ಕು ಖಾತೆ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.