ADVERTISEMENT

ಬರ್ತ್ ಡೇ ಕೇಕ್ ಎಸೆದು ಚಿರತೆ ದಾಳಿಯಿಂದ ಪಾರಾದ ಸಹೋದರರು!

ಪಿಟಿಐ
Published 1 ಜುಲೈ 2021, 15:45 IST
Last Updated 1 ಜುಲೈ 2021, 15:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬರ್ತ್ ಡೇ ಕೇಕ್ ಎಸೆದು ಚಿರತೆ ದಾಳಿಯಿಂದ ಸಹೋದರರಿಬ್ಬರು ಪಾರಾಗಿರುವ ಘಟನೆ ಮಧ್ಯಪ್ರದೇಶದಿಂದ ವರದಿಯಾಗಿದೆ.

ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಚಿರತೆ ಬೆನ್ನಟ್ಟಿತ್ತು. ಈ ಸಂದರ್ಭದಲ್ಲಿ ಪ್ರಾಣ ರಕ್ಷಿಸಿಕೊಳ್ಳಲು ಕೈಯಲ್ಲಿದ್ದ ಬರ್ತ್ ಡೇ ಕೇಕ್ ಅನ್ನು ಚಿರತೆಗೆ ಎಸೆದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಾಯ ಎದುರಾದಾಗ ಪ್ರಾಣ ರಕ್ಷಿಸಿಕೊಳ್ಳಲು ಪ್ರತಿಯೊಬ್ಬರು ಮಾಡುವ ಸಹಜ ಪ್ರವೃತ್ತಿ ಇದಾಗಿದೆ. ಅದನ್ನೇ ಅವರು ಮಾಡಿದರು. ಕೈಯಲ್ಲಿದ್ದ ಕೇಕ್ ಚಿರತೆಗೆ ಎಸೆದರು ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಮಗನ ಹುಟ್ಟುಹಬ್ಬ ಆಚರಣೆಗೆ ಫಿರೋಜ್ ಅವರು ತಮ್ಮ ಸಹೋದರ ಸಬೀರ್ ಜೊತೆಗೆ ಸಂಜೆಯ ವೇಳೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಕಬ್ಬಿನ ಹೊಲದಲ್ಲಿ ಚಿರತೆ ದಾಳಿಯಾಗಿದೆ.

ಈ ಸಂದರ್ಭದಲ್ಲಿ ಇಕ್ಕಟ್ಟಾದ ರಸ್ತೆಯಲ್ಲಿ ಬೈಕ್ ವೇಗವನ್ನು ಹೆಚ್ಚಿಸಿದ್ದರೂ ನರಭಕ್ಷಕ ಚಿರತೆ ಹಿಂಬಾಲಿಸಿತ್ತು. ಇದರಿಂದಾಗಿ ಕೈಯಲ್ಲಿದ್ದ ಕೇಕ್ ಎಸೆಯದೇ ಅನ್ಯ ಮಾರ್ಗವಿರಲಿಲ್ಲ. ಇದರಿಂದಾಗಿ ಚಿರತೆಯು ತನ್ನ ಪ್ರಯತ್ನದಲ್ಲಿ ವಿಫಲಗೊಂಡು ಹೊಲದ ಕಡೆಗೆ ಹಿಂತಿರುಗಿತ್ತು.

ಸುಮಾರು 500 ಮೀಟರ್‌ಗಳಷ್ಟು ದೂರ ಚಿರತೆ ನಮ್ಮನ್ನು ಹಿಂಬಾಲಿಸಿತ್ತು. ನಾವು ಸಾವಿನಿಂದ ಪಾರಾಗಿದ್ದೇವೆ ಎಂದು ಸಬೀರ್ ತಿಳಿಸಿದರು.

ಭಾರತದಲ್ಲಿ ಚಿರತೆಗಳ ಸಂಖ್ಯೆ 2014 ಮತ್ತು 2018ರ ನಡುವೆ ಶೇಕಡಾ 60ರಷ್ಟು ಹೆಚ್ಚಾಗಿದ್ದು, ಸುಮಾರು 13,000ಕ್ಕೆ ತಲುಪಿದೆ. ಈ ಪೈಕಿ ಮಧ್ಯಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಚಿರತೆಗಳಿವೆ ಎಂದು ಸರ್ಕಾರದ ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.