ADVERTISEMENT

ನೊಬೆಲ್ ಪ್ರಶಸ್ತಿಗೆ ವಿಲಕ್ಷಣ ಆಯ್ಕೆಗಳು: ಜೈರಾಮ್‌ ರಮೇಶ್‌

ಪಿಟಿಐ
Published 9 ಜುಲೈ 2025, 14:05 IST
Last Updated 9 ಜುಲೈ 2025, 14:05 IST
ಜೈರಾಮ್‌ ರಮೇಶ್‌
ಜೈರಾಮ್‌ ರಮೇಶ್‌   

ನವದೆಹಲಿ: ಶತಮಾನದಿಂದೀಚೆಗೆ ನೊಬೆಲ್ ಪ್ರಶಸ್ತಿಗೆ ವಿಲಕ್ಷಣ ಆಯ್ಕೆಗಳನ್ನು ಮಾಡಲಾಗುತ್ತಿದ್ದು, ಈ ಸಂಬಂಧಿಸಿದ ಲೋಪದೋಷಗಳು ಸ್ಪಷ್ಟವಾಗಿ ಕಾಣಿಸುತ್ತಿವೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಟೀಕಿಸಿದ್ದಾರೆ.

2025ನೇ ಸಾಲಿನ ನೊಬೆಲ್‌ ಪ್ರಶಸ್ತಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಪಾಕಿಸ್ತಾನ ಮತ್ತು ಇಸ್ರೇಲ್ ನಾಮನಿರ್ದೇಶನ ಮಾಡಿರುವುದನ್ನು ಉಲ್ಲೇಖಿಸಿ ಜೈರಾಮ್‌ ರಮೇಶ್‌ ಈ ಹೇಳಿಕೆ ನೀಡಿದ್ದಾರೆ.

‘ಸಾಮಾನ್ಯವಾಗಿ ನೊಬೆಲ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರನ್ನು ಯಾರು ನಾಮನಿರ್ದೇಶನ ಮಾಡಿದ್ದಾರೆ ಎಂಬುದು 50 ವರ್ಷಗಳ ನಂತರ ತಿಳಿಯುತ್ತದೆ. ನಾಮನಿರ್ದೇಶನ ಮಾಡಿದವರು ತಮ್ಮ ಆಯ್ಕೆಗಳನ್ನು ಸಾರ್ವಜನಿಕವಾಗಿ ಯಾವಾಗ ಬೇಕಾದರೂ ಘೋಷಿಸಿಕೊಳ್ಳುವ ಅವಕಾಶವೂ ಇದೆ. ಇಸ್ರೇಲ್‌ ಮತ್ತು ಪಾಕಿಸ್ತಾನವು ಟ್ರಂಪ್‌ ಅವರನ್ನು ನಾಮನಿರ್ದೇಶನ ಮಾಡಿರುವ ಬಗ್ಗೆ ಹೇಳಿಕೊಂಡಿವೆ’ ಎಂದಿದ್ದಾರೆ. 

ADVERTISEMENT

‘1937ರಿಂದ 1948ರ ಅವಧಿಯಲ್ಲಿ ಮಹಾತ್ಮ ಗಾಂಧಿ ಅವರ ಹೆಸರನ್ನು 12 ಬಾರಿ ನೊಬೆಲ್‌ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿತ್ತು. ಈ ಪೈಕಿ 9 ನಾಮನಿರ್ದೇಶನಗಳನ್ನು ಭಾರತೀಯರಲ್ಲದವರು ಮಾಡಿದ್ದರು. 1950ರಿಂದ 1961ರ ಅವಧಿಯಲ್ಲಿ ಜವಾಹರಲಾಲ್ ನೆಹರೂ ಅವರ ಹೆಸರನ್ನು 13 ಬಾರಿ ನಾಮನಿರ್ದೇಶನ ಮಾಡಲಾಗಿತ್ತು. ಈ ಪೈಕಿ 10 ಬಾರಿ ಭಾರತೀಯರಲ್ಲದವರು ನಾಮನಿರ್ದೇಶನ ಮಾಡಿದ್ದರು’ ಎಂದು ರಮೇಶ್‌ ಹೇಳಿದ್ದಾರೆ. 

ಜತೆಗೆ ‘ಕಳೆದೊಂದು ಶತಮಾನದಿಂದ ನೊಬೆಲ್‌ಗೆ ವಿಲಕ್ಷಣ ಆಯ್ಕೆಗಳಾಗುತ್ತಿದ್ದು, 1973ರಲ್ಲಿ ಡಾ.ಕಿಸ್ಸಿಂಜರ್‌ ಅವರನ್ನು ಆಯ್ಕೆ ಮಾಡಿದ್ದು ಕೂಡ ಭಾರಿ ವಿವಾದಕ್ಕೀಡಾಗಿತ್ತು’ ಎಂದೂ ರಮೇಶ್‌ ಉಲ್ಲೇಖಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.