
ಚೆನ್ನೈ: ‘ನರೇಂದ್ರ ಮೋದಿ ನಂತರ ಬಿಜೆಪಿಯಲ್ಲಿ ಮುಂದಿನ ಪ್ರಧಾನಿ ಯಾರು ಎಂಬುದನ್ನು ನಿರ್ಧರಿಸುವುದು ಪ್ರಧಾನಿ ಮತ್ತು ಬಿಜೆಪಿಯ ಜವಾಬ್ದಾರಿ’ ಎಂದು ರಾಷ್ದ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
ನರೇಂದ್ರ ಮೋದಿ ಅವರ ಉತ್ತರಾಧಿಕಾರಿ ಯಾರು ಎಂಬುದರ ಕುರಿತ ಚರ್ಚೆಯಲ್ಲಿ ಭಾಗಿಯಾಗಲು ನಿರಾಕರಿಸಿದ ಅವರು, ‘ಕೆಲವು ಪ್ರಶ್ನೆಗಳು ನನ್ನ ವ್ಯಾಪ್ತಿಯಿಂದ ಹೊರಗಿವೆ. ಆದ್ದರಿಂದ, ಅವುಗಳ ಬಗ್ಗೆ ನಾನು ಏನೂ ಹೇಳುವುದಿಲ್ಲ. ನಾನು ಶುಭ ಹಾರೈಸುವುದನ್ನು ಬಿಟ್ಟು ಬೇರೇನೂ ಮಾಡಲಾರೆ. ಮೋದಿ ಅವರ ನಂತರ ಯಾರು? ಎಂಬುದು ಬಿಜೆಪಿ ಮತ್ತು ಮೋದಿ ಅವರೇ ನಿರ್ಧರಿಸಬೇಕು’ ಎಂದು ಭಾಗವತ್ ಸ್ಪಷ್ಟಪಡಿಸಿದರು.
ಆರ್‌ಎಸ್ ಎಸ್ ಶತಮಾನೋತ್ಸವದ ಅಂಗವಾಗಿ ಮಂಗಳವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಳಿಬಂದ ‘ಮೋದಿ ನಂತರ ಮುಂದಿನ ಬಿಜೆಪಿ ಪ್ರಧಾನಿ ಯಾರು’ ಎಂಬ ಪ್ರಶ್ನೆಗೆ ಭಾಗವತ್ ಈ ರೀತಿ ಪ್ರತಿಕ್ರಿಸಿದರು.
ಭಾಗವತ್ ಅವರು, ನಾಲ್ಕು ತಿಂಗಳಲ್ಲಿ ಎರಡನೇ ಬಾರಿ ಹೀಗೆ ‘75 ವರ್ಷ ದಾಟಿದ ನಾಯಕರು ನಿವೃತ್ತಿಯಾಗುವ ಬಿಜೆಪಿಯ ‘ಅಲಿಖಿತ ನಿಯಮ’ ಮತ್ತು ಮೋದಿ ನಂತರ ಯಾರು ಎಂಬ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಆಗಸ್ಟ್‌ನಲ್ಲಿ, ಭಾಗವತ್ ಅವರು ‘ತಾವು ಅಥವಾ ಯಾರೂ 75 ನೇ ವಯಸ್ಸಿನಲ್ಲಿ ನಿವೃತ್ತರಾಗಬಾರದು’ ಎಂದು ಎಂದಿಗೂ ಪ್ರತಿಪಾದಿಸಿಲ್ಲ ಎಂದು ಹೇಳಿದ್ದರು. ಈ ಹಿಂದೆ ‘ವಿಭಿನ್ನ ಸಂದರ್ಭದಲ್ಲಿ’ ನೀಡಿದ ಹೇಳಿಕೆಗಳನ್ನು ಸ್ಪಷ್ಟಪಡಿಸಿದ್ದರು. ನಂತರ, ಈ ಸೆಪ್ಟೆಂಬರ್‌ನಲ್ಲಿ ಮೋದಿ ಅವರಿಗೆ 75 ವರ್ಷ ತುಂಬಿದ ನಂತರ ನಿವೃತ್ತಿಯಾಗುವ ಕುರಿತ ಚರ್ಚೆ ಮಹತ್ವ ಪಡೆದುಕೊಂಡಿತು. ನಂತರ ಬಿಜೆಪಿ, ‘ನಿರ್ದಿಷ್ಟ ವಯಸ್ಸಿನಲ್ಲಿ ನಿವೃತ್ತರಾಗಬೇಕೆಂದು ಹೇಳುವ ಯಾವುದೇ ನಿಯಮ ಪಕ್ಷದಲ್ಲಿ ಇಲ್ಲ’ ಎಂದು ಸ್ಪಷ್ಟಪಡಿಸಿತ್ತು.
’ಭಕ್ತರೇ ದೇವಾಲಯ ನಿರ್ವಹಿಸಬೇಕು’
ನಂತರ ಕಾರ್ಯಕ್ರಮದಲ್ಲಿ ನಡೆದ ಸಂವಾದದಲ್ಲಿ ‘ಭಕ್ತರೇ ದೇವಾಲಯಗಳನ್ನು ನಿರ್ವಹಿಸಬೇಕೆಂಬುದು ಜನರು ಮತ್ತು ನ್ಯಾಯಾಂಗದ ಒಮ್ಮತದ ಅಭಿಪ್ರಾಯವಾಗಿದೆ. ಆದರೆ ಪ್ರಸ್ತುತ ದೇವಾಲಯಗಳನ್ನು ಸರ್ಕಾರ ನಿರ್ವಹಿಸುತ್ತಿದೆ’ ಎಂದು ಭಾಗವತ್ ಹೇಳಿದರು.
‘ಖಾಸಗಿ ವ್ಯಕ್ತಿಗಳು ಕೆಲವು ದೇವಾಲಯಗಳನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ. ಅದೇ ರೀತಿ ಕೆಲವು ಸರ್ಕಾರಗಳೂ ದೇವಾಲಯಗಳನ್ನು ಚೆನ್ನಾಗಿ ನಿರ್ವಹಿಸುತ್ತಿವೆ. ಈ ಸಮಸ್ಯೆಯನ್ನು ನಿಭಾಯಿಸಲು ಒಂದು ಸಾಧನ ಬೇಕು. ಅದೇ ಅಖಿಲ ಭಾರತ ಸಮಿತಿ ಪ್ರಾಂತೀಯ ಸಮಿತಿ ಜಿಲ್ಲಾ ಸಮಿತಿ ಮತ್ತು ಸ್ಥಳೀಯ ಸಮಿತಿಗಳ ರಚನೆ’ ಎಂದು ಭಾಗವತ್ ಹೇಳಿದರು.
‘ಒಂದು ಸಾರಿ ಈ ಸಾಧನ ಸಿದ್ಧವಾದರೆ ನಂತರ ದೇವಾಲಯಗಳನ್ನು ನಿರ್ವಹಿಸುವುದು ಸರ್ಕಾರವೋ ಭಕ್ತರೋ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಆದರೆ ಭಕ್ತರು ದೇವಾಲಯಗಳನ್ನು ನಿರ್ವಹಣೆ ಮಾಡಬೇಕೆಂಬುದಕ್ಕೆ ಸಾಮಾನ್ಯ ಒಮ್ಮತವಿದೆ. ನಾವು ಈ ಕುರಿತು ಹೆಚ್ಚು ಕೆಲಸ ಮಾಡಬೇಕು’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.