ADVERTISEMENT

ಬಿಜೆಪಿಯಿಂದ ನಾಲ್ಕು ರಾಜ್ಯಗಳಿಗೆ ನೂತನ ಅಧ್ಯಕ್ಷರ ನೇಮಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜುಲೈ 2023, 10:18 IST
Last Updated 4 ಜುಲೈ 2023, 10:18 IST
ಬಿಜೆಪಿ ಧ್ವಜ
ಬಿಜೆಪಿ ಧ್ವಜ   

ನವದೆಹಲಿ: ಲೋಕಸಭಾ ಚುನಾ ವಣೆಗೂ ಮುನ್ನ ಪಕ್ಷದ ಸಂಘಟನೆಯಲ್ಲಿ ಇನ್ನಷ್ಟು ಬದಲಾವಣೆ ಮಾಡಲು ಮುಂದಾಗಿರುವ ಬಿಜೆಪಿ, ಪಕ್ಷದ ನಾಲ್ಕು ರಾಜ್ಯ ಘಟಕಗಳಿಗೆ ಅಧ್ಯಕ್ಷರನ್ನು ಮಂಗಳವಾರ ನೇಮಕ ಮಾಡಿದೆ. ಇದರೊಂದಿಗೆ, ಕೇಂದ್ರ ಸಚಿವ ಸಂಪುಟ ಪುನರ್‌ ರಚನೆಯಾಗುವ ಸಾಧ್ಯತೆ ದಟ್ಟವಾಗಿದೆ. 

ಪ್ರಧಾನಿ ನರೇಂದ್ರ ಮೋದಿ ಅವರು ಮಂತ್ರಿ ಪರಿಷತ್‌ನ ಸದಸ್ಯರೊಂದಿಗೆ ಸೋಮವಾರ ಸಭೆ ನಡೆಸಿದ್ದರು. ಅದರ ಬೆನ್ನಲ್ಲೇ, ನಾಲ್ಕು ರಾಜ್ಯಗಳ ಅಧ್ಯಕ್ಷರ ಬದಲಾವಣೆ ಆಗಿದೆ.

ಬಿಜೆಪಿ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅವಧಿ ಮುಗಿದಿದೆ. ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ನೇಮಿಸಲು ಹೈಕಮಾಂಡ್‌ ಉತ್ಸುಕವಾಗಿದೆ. ಈ ಬಗ್ಗೆ ಶೀಘ್ರ ಆದೇಶ ಹೊರಬೀಳಲಿದೆ. ಕೇಂದ್ರ ಸಚಿವ ಸಂಪುಟ ಪುನರ್ ರಚನೆಗೆ ಮುನ್ನ ಈ ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. 

ADVERTISEMENT

ನವೆಂಬರ್‌ನಲ್ಲಿ ತೆಲಂಗಾಣ ವಿಧಾನಸಭಾ ಚುನಾವಣೆ ನಡೆಯಲಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಬಂಡಿ ಸಂಜಯ್‌ ಕುಮಾರ್‌ ಕಾರ್ಯವೈಖರಿ ಬಗ್ಗೆ ಪಕ್ಷದೊಳಗೆ ಅಸಮಾಧಾನ ವ್ಯಕ್ತವಾಗಿತ್ತು. ಅವರ ಸ್ಥಾನಕ್ಕೆ ಕೇಂದ್ರ ಸಚಿವ ಜಿ.ಕಿಶನ್‌ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ. ಬಂಡಿ ಅವರು ಕೇಂದ್ರ ಸಚಿವ ಸಂಪುಟಕ್ಕೆ ಸೇರುವ ಸಾಧ್ಯತೆ ಇದೆ. ಒಬಿಸಿ ನಾಯಕ ಎಟೆಲಾ ರಾಜೇಂದರ್ ಅವರನ್ನು ಚುನಾವಣಾ ನಿರ್ವಹಣಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ರಾಜೇಂದರ್ ಬಿಆರ್‌ಎಸ್‌ನಲ್ಲಿದ್ದರು. 

ಆಂಧ್ರ ಪ್ರದೇಶದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಕೇಂದ್ರದ ಮಾಜಿ ಸಚಿವೆ ಡಿ.ಪುರಂದೇಶ್ವರಿ ನೇಮಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಎನ್‌.ಟಿ.ರಾಮರಾವ್‌ ಅವರ ಪುತ್ರಿ. ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರ್ಪಡೆಯಾಗಿದ್ದರು.

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಟಿಡಿಪಿ ಉತ್ಸುಕವಾಗಿದೆ. ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಬಿಜೆಪಿಯ ರಾಷ್ಟ್ರೀಯ ನಾಯಕರೊಂದಿಗೆ ಮಾತು ಕತೆ ನಡೆಸಿದ್ದಾರೆ. ಪುರಂದೇಶ್ವರಿ ನೇಮಕ ಆಗಿರುವುದು ಕುತೂಹಲಕ್ಕೆ ಕಾರಣ ವಾಗಿದೆ. ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಸೇರಿರುವ ಮಾಜಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರನ್ನು ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರನ್ನಾಗಿ ಮಾಡಲಾಗಿದೆ. 

ಜಾರ್ಖಂಡ್‌ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಜಿ ಮುಖ್ಯಮಂತ್ರಿ ಬಾಬುಲಾಲ್‌ ಮರಾಂಡಿ ಅವರನ್ನು ನೇಮಿಸಲಾಗಿದೆ. ಬುಡಕಟ್ಟು ಸಮುದಾಯದ ನಾಯಕರಾದ ಅವರು 2006ರಲ್ಲಿ ಬಿಜೆಪಿ ತ್ಯಜಿಸಿದ್ದರು. ’ಜಾರ್ಖಂಡ್‌ ವಿಕಾಸ್‌ ಮೋರ್ಚಾ’ ಪಕ್ಷ ಸ್ಥಾಪಿಸಿದ್ದ ಅವರು, ಅದನ್ನು 2020ರಲ್ಲಿ ಬಿಜೆಪಿಯೊಂದಿಗೆ ವಿಲೀನ ಮಾಡಿದ್ದರು. 

ಪಂಜಾಬ್‌ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಸುನೀಲ್‌ ಜಾಖಡ್ ಅವರನ್ನು ನೇಮಕ ಮಾಡಲಾಗಿದೆ. ಕಾಂಗ್ರೆಸ್‌ನಲ್ಲಿದ್ದ ಅವರು ಕಳೆದ ವರ್ಷ ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.