ADVERTISEMENT

ಪಶ್ಚಿಮಬಂಗಾಳ| 2 ಕೋಟಿ ಜನರಿಂದ ಅಮಿತ್ ಶಾ ವರ್ಚುವಲ್ ರ್‍ಯಾಲಿ ವೀಕ್ಷಣೆ: ಬಿಜೆಪಿ

ಪಿಟಿಐ
Published 10 ಜೂನ್ 2020, 3:37 IST
Last Updated 10 ಜೂನ್ 2020, 3:37 IST
ಅಮಿತ್ ಶಾ
ಅಮಿತ್ ಶಾ   

ಕೋಲ್ಕತ್ತ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವರ್ಚುವಲ್ ರ್‍ಯಾಲಿ ಯಶಸ್ವಿಯಾಗಿದ್ದು, ಪಶ್ಚಿಮ ಬಂಗಾಳದಾದ್ಯಂತ 2 ಕೋಟಿಗಿಂತಲೂ ಹೆಚ್ಚು ಜನರುವೀಕ್ಷಿಸಿದ್ದಾರೆ ಎಂದು ಬಿಜೆಪಿ ಹೇಳಿದೆ. ಆದರೆ ಇದು ವಾಸ್ತವಕ್ಕೆ ದೂರದ ಸಂಗತಿ ಎಂದು ತೃಣಮೂಲ ಕಾಂಗ್ರೆಸ್ ಪ್ರತಿಕ್ರಿಯಿಸಿದೆ.

ಜನಸಂವಾದ ಅಭಿಯಾನದ ಅಂಗವಾಗಿ ಅಮಿತ್ ಶಾ ನವದೆಹಲಿಯಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಮಂಗಳವಾರ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದರು.

ಪಶ್ಚಿಮ ಬಂಗಾಳದ ಜನರಿಗೆ ವರ್ಚುವಲ್ ರ್‍ಯಾಲಿ ವಿಶೇಷ ಪ್ರಯೋಗವಾಗಿತ್ತು, ಅದು ಯಶಸ್ವಿಯಾಯಿತು. ಜನರು ಟಿವಿ, ಸಾಮಾಜಿಕ ಮಾಧ್ಯಮಗಳ ಮೂಲಕ ರ್‍ಯಾಲಿ ವೀಕ್ಷಿಸಿದ್ದಾರೆ. ನಮಗೆ ಲಭಿಸಿದ ವರದಿ ಪ್ರಕಾರ ಸುಮಾರು 2 ಕೋಟಿ ಜನರು ರ್‍ಯಾಲಿ ವೀಕ್ಷಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಯಾಂತನ್ ಬಸು ಹೇಳಿದ್ದಾರೆ.

ADVERTISEMENT

ವರ್ಚುವಲ್ ರ್‍ಯಾಲಿಗಾಗಿ 70,000 ಸ್ಮಾರ್ಟ್ ಟಿವಿ ಮತ್ತು 15,000 ಎಲ್ಇಡಿ ಪರದೆ ಸ್ಥಾಪಿಸಲಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಅಂದಾಜು 78,000 ಮತಕಟ್ಟೆಗಳು ಇವೆ.

ಟಿವಿಯಲ್ಲಿ ರ್‍ಯಾಲಿ ವೀಕ್ಷಿಸಿದ್ದಲ್ಲದೆ ಬಹುತೇಕ ಜನರು ಫೇಸ್‌ಬುಕ್, ಯುಟ್ಯೂಬ್ ಮತ್ತು ನಮ್ಮ ಪಕ್ಷದ ವೆಬ್‌ಸೈಟ್‌ನಲ್ಲಿ ವೀಕ್ಷಿಸಿದ್ದಾರೆ. ಹಲವಾರು ನಾಯಕರು ಮತ್ತು ಪತ್ರಕರ್ತರು ಮುರಳೀಧರ್ ಸೇನ್ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ರ್‍ಯಾಲಿ ವೀಕ್ಷಿಸಿದ್ದಾರೆ ಎಂದು ಬಸು ಹೇಳಿದ್ದಾರೆ.

ಅದೇ ವೇಳೆ ರಾಜ್ಯ ಅಂಪನ್ ಚಂಡಮಾರುತದ ಹೊಡೆತದಿಂದ ನಾಶನಷ್ಟ ಅನುಭವಿಸುತ್ತಿರುವಾಗ, ಕೋವಿಡ್-19 ವಿರುದ್ಧ ಹೋರಾಡುತ್ತಿರುವಾಗ ಅಮಿತ್ ಶಾ ರ್‍ಯಾಲಿ ನಡೆಸಿದ್ದನ್ನು ತೃಣಮೂಲ ಕಾಂಗ್ರೆಸ್ ನೇತೃತ್ವ ಟೀಕಿಸಿದ್ದು,ವರ್ಚುವಲ್ ರ್‍ಯಾಲಿ ಫ್ಲಾಪ್ ಶೋ ಎಂದಿದೆ.

ಅಮಿತ್ ಶಾ ರ್‍ಯಾಲಿ ನಡೆಯುತ್ತಿದ್ದಂತೆ ಟಿಎಂಸಿ ಟ್ವಿಟರ್‌ನಲ್ಲಿ #BengalRejectsAmitShah ಹ್ಯಾಷ್‌ಟ್ಯಾಗ್ ಟ್ರೆಂಡ್ ಮಾಡಿತ್ತು.

ಅಮಿತ್ ಶಾ ಅವರ ರಾಜಕೀಯ ಗಿಮಿಕ್‌ಗಳಿಗೆ ಬಂಗಾಳದಲ್ಲಿ ಸ್ಥಾನವಿಲ್ಲ. ಅವರ ರ್‍ಯಾಲಿ ನಡೆಯುತ್ತಿದ್ದಾಗಲೇ ಬಂಗಾಳದ ಜನರು ಬಿಜೆಪಿ ಮತ್ತು ಅಮಿತ್ ಶಾ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ದನಿಯೆತ್ತಿದ್ದಾರೆ. #BengalRejectsAmitShah ಕೊಲ್ಕತ್ತಾದಲ್ಲಿ ಟಾಪ್ ಟ್ರೆಂಡ್ ಆಗಿದ್ದುರಾಷ್ಟ್ರಮಟ್ಟದ ಟ್ವಿಟರ್ ಟ್ರೆಂಡ್‌ನಲ್ಲಿ ಈ ಹ್ಯಾಷ್‌ಟ್ಯಾಗ್ 17ನೇ ಸ್ಥಾನದಲ್ಲಿತ್ತು ಎಂದು ಟಿಎಂಸಿಯ ಹಿರಿಯ ನೇತಾರ ಹೇಳಿದ್ದಾರೆ.

2 ಕೋಟಿ ಜನರು ರ್‍ಯಾಲಿ ವೀಕ್ಷಣೆ ಮಾಡಿದ್ದಾರೆ ಎಂದು ಬಿಜೆಪಿ ಹೇಳುತ್ತಿದೆ. ಇದು ವಾಸ್ತವಕ್ಕೆ ದೂರವಾದುದು. ಸಾಮಾನ್ಯ ರ್‍ಯಾಲಿಗೆ ಜನರನ್ನು ಸೇರಿಸಲು ಬಿಜೆಪಿಯಿಂದ ಸಾಧ್ಯವಾಗುವುದಿಲ್ಲ. ಹೀಗಿರುವಾಗ 2 ಕೋಟಿ ವೀಕ್ಷಣೆ ಹೇಗೆ ಸಿಗುತ್ತದೆ?. ಪ್ರತಿಯೊಂದು ವಿಷಯದಲ್ಲಿಯೂ ಸುಳ್ಳು ಹೇಳುವುದನ್ನು ಬಿಜೆಪಿ ನಿಲ್ಲಿಸಲಿ ಎಂದು ಟಿಎಂಸಿ ನೇತಾರ ಹೇಳಿದ್ದಾರೆ.

ಟಿಎಂಸಿ ನೇತೃತ್ವದ ಪಶ್ಚಿಮ ಬಂಗಾಳ ವಲಸೆ ಕಾರ್ಮಿಕರ ಬಗ್ಗೆ ನಿರಾಸಕ್ತಿ ಹೊಂದಿದೆ. ಶ್ರಮಿಕ್ ವಿಶೇಷ ರೈಲುಗಳನ್ನು ನಿಲ್ಲಿಸುವ ಮೂಲಕ ಮಮತಾ ಬ್ಯಾನರ್ಜಿ ವಲಸೆ ಕಾರ್ಮಿಕರನ್ನು ಅವಮಾನಿಸಿದ್ದಾರೆ. ಹಾಗಾಗಿ ಈ ಕಾರ್ಮಿಕರು 2021ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯನ್ನು ತಿರಸ್ಕರಿಸುತ್ತಾರೆ ಎಂದು ಅಮಿತ್ ಶಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.