ADVERTISEMENT

RSS ಕಚೇರಿ ಎದುರು ಇರುವ ರಾಣಿ ಲಕ್ಷ್ಮೀಬಾಯಿ ಪ್ರತಿಮೆ ತೆರವಿಗೆ BJP ಪಿತೂರಿ: AAP

ಪಿಟಿಐ
Published 26 ಸೆಪ್ಟೆಂಬರ್ 2024, 2:58 IST
Last Updated 26 ಸೆಪ್ಟೆಂಬರ್ 2024, 2:58 IST
<div class="paragraphs"><p>ಎಎಪಿ ಮತ್ತು ಬಿಜೆಪಿ</p></div>

ಎಎಪಿ ಮತ್ತು ಬಿಜೆಪಿ

   

ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಕಚೇರಿ ಮುಂಭಾಗ ಇರುವ ರಾಣಿ ಲಕ್ಷ್ಮೀಬಾಯಿ ಅವರ ಪ್ರತಿಮೆಯನ್ನು ತೆರವುಗೊಳಿಸಲು ಬಿಜೆಪಿ ಪಿತೂರಿ ನಡೆಸುತ್ತಿದೆ ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ನಾಯಕ ಮತ್ತು ರಾಜ್ಯಸಭಾ ಸಂಸದ ಸಂಜಯ್‌ ಸಿಂಗ್‌ ಆರೋಪಿಸಿದ್ದಾರೆ.

ಈ ಸಂಬಂಧ ಎಎಪಿ ಹೇಳಿಕೆ ಬಿಡುಗಡೆ ಮಾಡಿದೆ.

ADVERTISEMENT

'ಈ ಸಂಚು ದೇಶಭಕ್ತರನ್ನು ಅವಮಾನಿಸುವ ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ದ್ರೋಹ ಬಗೆಯುವ ಬಿಜೆಪಿ ಪರಂಪರೆಯ ಭಾಗವಾಗಿದೆ' ಎಂದಿರುವ ಸಿಂಗ್‌, 'ಬಿಜೆಪಿ ಸದಸ್ಯರು ಮತ್ತು ಅವರ ಪೂರ್ವಜರು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರಿಗೆ ಬೆಂಬಲವಾಗಿ ನಿಂತಿದ್ದರು. ಅದೇ, ದ್ರೋಹ ಇಂದಿಗೂ ಮುಂದುವರಿದಿದೆ' ಎಂದು ಕಿಡಿಕಾರಿದ್ದಾರೆ.

'ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ರಾಣಿ ಲಕ್ಷ್ಮೀಬಾಯಿ ಪ್ರತಿಮೆ ಇರುವುದನ್ನು ಬಿಜೆಪಿ ಸಹಿಸುವುದಿಲ್ಲ. ಪ್ರತಿಮೆ ತೆರವುಗೊಳಿಸುವುದನ್ನು ತಡೆಯಲು ಎಎಪಿಯು ರಾಷ್ಟ್ರ ರಾಜಧಾನಿಯಾದ್ಯಂತ ಅಭಿಯಾನ ನಡೆಸಲಿದೆ' ಎಂದು ಎಚ್ಚರಿಸಿದ್ದಾರೆ.

'ಸಂಸತ್ತಿನಲ್ಲಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿ, ಬಾಬಾ ಸಾಹೇಬ್‌ ಡಾ. ಬಿ.ಆರ್‌. ಅಂಬೇಡ್ಕರ್‌ ಮತ್ತು ಛತ್ರಪತಿ ಶಿವಾಜಿ ಮಹಾರಾಜ ಅವರ ಪ್ರತಿಮೆಗಳಿಗೆ ಗೌರವ ಸಲ್ಲಿಸಲು ದೇಶದೆಲ್ಲೆಡೆಯಿಂದ ಜನರು ಬರುತ್ತಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಆಡಳಿತವು ಅವುಗಳನ್ನು ಸಂಸತ್ತಿನಿಂದ ತೆರವುಗೊಳಿಸುವ ಮೂಲಕ ಮಹಾನ್‌ ನಾಯಕರನ್ನು ಅವಮಾನಿಸಿದೆ' ಎಂದು ಗುಡುಗಿದ್ದಾರೆ.

ಇದೀಗ, ಜಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಪ್ರತಿಮೆಯನ್ನು ತೆರವು ಮಾಡಲು ಯೋಜಿಸುತ್ತಿದೆ ಎಂದು ದೂರಿದ್ದಾರೆ.

'ಆರ್‌ಎಸ್‌ಎಸ್‌ ಪ್ರಧಾನ ಕಚೇರಿ ಮುಂಭಾಗ ಇರುವ ರಾಣಿ ಲಕ್ಷ್ಮೀಬಾಯಿ ಪ್ರತಿಮೆಯನ್ನು ತೆರವುಗೊಳಿಸಿದರೆ, ಬಿಜೆಪಿಯನ್ನು ಬಯಲಿಗೆಳೆಯುತ್ತೇವೆ. ಈ ವಿಚಾರವನ್ನು ಚುನಾವಣೆಗೆ ಸಜ್ಜಾಗುತ್ತಿರುವ ಹರಿಯಾಣದ ಜನರ ಮುಂದಕ್ಕೆ ಕೊಂಡೊಯ್ಯುತ್ತೇವೆ. ಬಿಜೆಪಿಯ ಈ ಕೃತ್ಯ ಕ್ಷಮಿಸಲಸಾಧ್ಯವಾದ ಅಪರಾಧವಾಗಲಿದೆ. ಇದು ದೇಶದ್ರೋಹದ ಕೃತ್ಯವಾಗಲಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.