ನವದೆಹಲಿ: ಹಿಂದಿ ಕಲಿಯದಿದ್ದಕ್ಕಾಗಿ ಆಫ್ರಿಕನ್ ಪ್ರಜೆಯೊಬ್ಬರಿಗೆ ಬಿಜೆಪಿ ಕೌನ್ಸಿಲರ್ ರೇಣು ಚೌಧರಿ ಅವರು ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪೂರ್ವ ದೆಹಲಿಯ ಪತ್ಪರ್‌ಗಂಜ್ ಕೌನ್ಸಿಲರ್ ಆಗಿರುವ ಚೌಧರಿ, ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ಗೆ ಸೇರಿದ ಉದ್ಯಾನದಲ್ಲಿ ಮಕ್ಕಳಿಗೆ ಫುಟ್‌ಬಾಲ್ ತರಬೇತಿ ನೀಡುತ್ತಿರುವ ಆಫ್ರಿಕನ್ ಪ್ರಜೆಯನ್ನು ಮಾತನಾಡಿಸಿದ್ದಾರೆ.
ಈ ವೇಳೆ ಭಾಷೆ ಕಲಿಯುವಂತೆ ತಾವು ಈ ಹಿಂದೆ ನೀಡಿದ ಸಲಹೆಯನ್ನು ನಿರ್ಲಕ್ಷ್ಯಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದಿನ ಒಂದು ತಿಂಗಳೊಳಗೆ ಭಾಷೆ ಕಲಿಯದಿದ್ದರೆ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಭಾರತದಲ್ಲಿ ಹಣ ಸಂಪಾದಿಸುವ ಪ್ರತಿಯೊಬ್ಬರು ಅಲ್ಲಿನ ಭಾಷೆ ಕಲಿಯಬೇಕು ಎಂದೂ ಅವರು ಹೇಳಿದ್ದಾರೆ.
ಚೌಧರಿ ಅವರ ನಡೆಯನ್ನು ಕೆಲವರು ಸಮರ್ಥಿಸಿಕೊಂಡಿದ್ದಾರೆ. ಇನ್ನು ಕೆಲವರು, ಹಿಂದಿಯೇತರ ರಾಜ್ಯದಲ್ಲಿರುವ ನಿಮ್ಮವರಿಗೂ ಇದೇ ಉಪದೇಶ ನೀಡಿ ಎಂದು ಹೇಳಿದ್ದಾರೆ.
ಇನ್ನು, ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿರುವ ಚೌಧರಿ, ‘ಆ ವ್ಯಕ್ತಿಗೆ ಹಿಂದಿ ಕಲಿಯುವಂತೆ ಎಂಟು ತಿಂಗಳ ಹಿಂದೆಯೇ ಸಲಹೆ ನೀಡಿದ್ದೆ. ಹಿಂದಿ ಕಲಿಯುವುದಾದರೆ ತರಬೇತಿಗೆ ತಗಲುವ ವೆಚ್ಚವನ್ನು ನಾನೇ ಭರಿಸುವುದಾಗಿಯೂ ಹೇಳಿದ್ದೆ’ ಎಂದಿದ್ದಾರೆ.
ತೆರಿಗೆ ಪಾವತಿಸಿದೆ ಆ ವ್ಯಕ್ತಿ ಉದ್ಯಾನದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದಾನೆ. ಸ್ಪಚ್ಛತೆಯನ್ನು ಕಾಪಾಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.