ADVERTISEMENT

ಪ್ರಧಾನಿ ಮೋದಿಗೆ ಜೀವ ಬೆದರಿಕೆ ಆರೋಪ: ಖರ್ಗೆ, ರಾಹುಲ್‌ ಕ್ಷಮೆಗೆ ಬಿಜೆಪಿ ಪಟ್ಟು

ಪಿಟಿಐ
Published 15 ಡಿಸೆಂಬರ್ 2025, 16:18 IST
Last Updated 15 ಡಿಸೆಂಬರ್ 2025, 16:18 IST
ಕಿರಣ್‌ ರಿಜಿಜು
ಕಿರಣ್‌ ರಿಜಿಜು   

ನವದೆಹಲಿ: ಕಾಂಗ್ರೆಸ್‌ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಘೋಷಣೆಗಳನ್ನು ಕೂಗಲಾಗಿದೆ ಎಂಬ ಆರೋಪವು ಸೋಮವಾರ ಸಂಸತ್ತಿನ ಉಭಯ ಸದನಗಳಲ್ಲಿ ಗದ್ದಲಕ್ಕೆ ಕಾರಣವಾಯಿತು. 

ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ ಗಾಂಧಿ ಅವರು ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಪಟ್ಟು ಹಿಡಿಯಿತು. ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರು ಪರಸ್ಪರ ಮಾತಿನ ಚಕಮಕಿ ನಡೆಸಿದ್ದರಿಂದ ಲೋಕಸಭೆ ಕಲಾಪವನ್ನು ಬೆಳಿಗ್ಗೆ ಎರಡು ಸಲ ಮುಂದೂಡಲಾಯಿತು.

ಭಾನುವಾರ ಇಲ್ಲಿನ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್‌ ಆಯೋಜಿಸಿದ್ದ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತನೊಬ್ಬ ‘ಮೋದಿ ಅವರ ಸಮಾಧಿ ತೋಡುತ್ತೇವೆ’ (ಮೋದಿ ತೇರಿ ಕಬರ್‌ ಖುದೇಗೀ) ಎಂಬ ಘೋಷಣೆ ಕೂಗಿದ್ದಾಗಿ ಆರೋಪಿಸಲಾಗಿದೆ. 

ADVERTISEMENT

ಬೆಳಿಗ್ಗೆ 11ಕ್ಕೆ ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಈ ವಿಷಯ ಪ್ರಸ್ತಾಪಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು, ‘ನಾವು ರಾಜಕೀಯ ವಿರೋಧಿಗಳೇ ಹೊರತು ಶತ್ರುಗಳಲ್ಲ. ಪ್ರಧಾನಿಯವರ ಸಮಾಧಿ ತೋಡುವುದಾಗಿ ಕಾಂಗ್ರೆಸ್ ರ್‍ಯಾಲಿಯಲ್ಲಿ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ. ಇದು ಅತ್ಯಂತ ದುರದೃಷ್ಟಕರ ಘಟನೆ’ ಎಂದು ಹೇಳಿದರು. ಅವರ ಮಾತಿಗೆ ಕಾಂಗ್ರೆಸ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. 

‘ಪ್ರಧಾನಿ ಅವರಿಗೆ ಬೆದರಿಕೆ ಹಾಕಿರುವುದಕ್ಕೆ ಕಾಂಗ್ರೆಸ್‌ ಕ್ಷಮೆಯಾಚಿಸಬೇಕು’ ಎಂದು ರಿಜಿಜು ಒತ್ತಾಯಿಸಿದರು. ಈ ವೇಳೆ ಗದ್ದಲ ಉಂಟಾದ ಕಾರಣ ಸ್ಪೀಕರ್‌ ಓಂ ಬಿರ್ಲಾ ಅವರು ಕಲಾಪವನ್ನು ಮಧ್ಯಾಹ್ನ 12ಕ್ಕೆ ಮುಂದೂಡಿದರು. ಕಲಾಪ ಮತ್ತೆ ಶುರುವಾದಾಗ ಕಾಂಗ್ರೆಸ್‌ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ಪ್ರತಿಭಟನೆ ನಡೆಸಿ, ಗೃಹ ಸಚಿವ ಅಮಿತ್‌ ಶಾ ವಿರುದ್ಧ ಘೋಷಣೆ ಕೂಗಿದರು. 

ಸಭಾಧ್ಯಕ್ಷರ ಪೀಠದಲ್ಲಿದ್ದ ಬಿಜೆಪಿಯ ದಿಲೀಪ್‌ ಸೈಕಿಯಾ, ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಲು ಅವಕಾಶ ನೀಡುವುದಾಗಿ ವಿಪಕ್ಷಗಳ ಸದಸ್ಯರಿಗೆ ಭರವಸೆ ನೀಡಿದರು. ಆದರೆ ಗದ್ದಲ ಮುಂದುವರಿದ ಕಾರಣ ಕಲಾಪವನ್ನು 2ಕ್ಕೆ ಮುಂದೂಡಲಾಯಿತು. ಮಧ್ಯಾಹ್ನದ ಬಳಿಕ ಕಲಾಪ ಸುಗಮವಾಗಿ ನಡೆಯಿತು.

ಕಾಂಗ್ರೆಸ್‌ನಲ್ಲಿ ಮಾನವೀಯತೆ ಉಳಿದಿದ್ದರೆ ಮತ್ತು ಅದರ ನಾಯಕರು ದೇಶದ ಜನರನ್ನು ಗೌರವಿಸುವುದಾದರೆ ತಕ್ಷಣವೇ ಸಂಸತ್ತಿನ ಉಭಯ ಸದನಗಳಲ್ಲಿ ಕ್ಷಮೆಯಾಚಿಸಬೇಕು 
ಕಿರಣ್‌ ರಿಜಿಜು ಸಂಸದೀಯ ವ್ಯವಹಾರಗಳ ಸಚಿವ

‘ಕಾಂಗ್ರೆಸ್‌ನ ಮನಃಸ್ಥಿತಿ ತೋರಿಸುತ್ತದೆ’

ರಾಜ್ಯಸಭೆಯಲ್ಲಿ ಸದನದ ನಾಯಕ ಜೆ.ಪಿ. ನಡ್ಡಾ ಅವರು ಬೆಳಿಗ್ಗೆ 11ಕ್ಕೆ ಈ ವಿಷಯ ಪ್ರಸ್ತಾಪಿಸಿದಾಗಲೂ ಗದ್ದಲ ಉಂಟಾಯಿತು. ‘ಪ್ರಧಾನಿ ಅವರಿಗೆ ಬೆದರಿಕೆ ಒಡ್ಡಿರುವುದು ಕಾಂಗ್ರೆಸ್‌ನ ಚಿಂತನೆ ಮತ್ತು ಮನಃಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ’ ಎಂದು ನಡ್ಡಾ ಟೀಕಿಸಿದರು. ‘ಪ್ರಧಾನಿ ವಿರುದ್ಧ ಇಂತಹ ಘೋಷಣೆಗಳನ್ನು ಕೂಗುವುದು ಮತ್ತು ಅವರ ಸಾವನ್ನು ಬಯಸುವುದನ್ನು ಒಪ್ಪಲಾಗದು’ ಎಂದರು. ಸದನದಲ್ಲಿ ಹಾಜರಿದ್ದ ಮಲ್ಲಿಕಾರ್ಜುನ ಖರ್ಗೆ ಮತ್ತು ಸೋನಿಯಾ ಗಾಂಧಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕಲಾಪವನ್ನು ಮಧ್ಯಾಹ್ನ 12ಕ್ಕೆ ಮುಂದೂಡಲಾಯಿತು. ಆ ಬಳಿಕ ಕಲಾಪ ಯಾವುದೇ ಅಡ್ಡಿಯಿಲ್ಲದೆ ನಡೆಯಿತು.

‘ದುರದೃಷ್ಟಕರ ಘಟನೆ’

‘ಪ್ರಧಾನಿ ಮೋದಿ ಅವರ ಸಮಾಧಿಯನ್ನು ತೋಡುವುದಾಗಿ ಕಾಂಗ್ರೆಸ್ ಕಾರ್ಯಕರ್ತರು ಬಹಿರಂಗವಾಗಿ ಘೋಷಿಸಿರುವುದು ಅತ್ಯಂತ ದುರದೃಷ್ಟಕರ ಘಟನೆ’ ಎಂದು ಸಚಿವ ಕಿರಣ್‌ ರಿಜಿಜು ಹೇಳಿದರು. ಸೋಮವಾರ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಾಜಕೀಯ ನಾಯಕರು ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪರಸ್ಪರ ಟೀಕಿಸುತ್ತಾರೆಯಾದರೂ ಸಾರ್ವಜನಿಕವಾಗಿ ಅವರು ಪರಸ್ಪರರ ಒಳಿತನ್ನು ಬಯಸುತ್ತಾರೆ’ ಎಂದರು. ‘ನಾವು ಒಬ್ಬರನ್ನೊಬ್ಬರು ಸೈದ್ಧಾಂತಿಕವಾಗಿ ವಿರೋಧಿಸುತ್ತೇವೆ. ಆದರೆ ಪರಸ್ಪರರನ್ನು ಕೊಲ್ಲುವ ಬಗ್ಗೆ ಎಂದಿಗೂ ಯೋಚಿಸುವುದಿಲ್ಲ ಹಾಗೂ ಅದರ ಬಗ್ಗೆ ಮಾತನಾಡುವುದಿಲ್ಲ. ಆದರೆ ಇದು ಯಾವ ರೀತಿಯ ಮನಃಸ್ಥಿತಿ? ಕೆಲವರು ರಾಜಕೀಯ ಪ್ರತಿಸ್ಪರ್ಧಿಗಳನ್ನು ಕೊಲ್ಲುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕುತ್ತಿರುವುದಕ್ಕೆ ಏನನ್ನೋಣ’ ಎಂದು ಪ್ರಶ್ನಿಸಿದರು.