ಗುವಾಹಟಿ/ಲಖೀಂಪುರ ವರದಿ: ದೇಶದ ವಿವಿಧ ಭಾಗಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನಗೊಳಿಸುವ ಬಗ್ಗೆ ಬಿಜೆಪಿ ನಾಯಕರು ಮಾತನಾಡುತ್ತಾರೆ. ಆದರೆ ಅದನ್ನು ಅಸ್ಸಾಂನಲ್ಲಿ ಜಾರಿಗೊಳಿಸುವ ಪ್ರಸ್ತಾಪ ಮಾಡಲು ಧೈರ್ಯವಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸೋಮವಾರ ಆರೋಪಿಸಿದ್ದಾರೆ.
ಗುವಾಹಟಿಯ ಪ್ರಸಿದ್ಧ ಕಾಮಾಕ್ಯ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಪ್ರಿಯಾಂಕಾ ಅವರು ತಮ್ಮ ಎರಡು ದಿನಗಳ ಅಸ್ಸಾಂ ಪ್ರವಾಸಕ್ಕೆ ಸೋಮವಾರ ಚಾಲನೆ ನೀಡಿದರು. ಅಸ್ಸಾಂನ ಕಾಂಗ್ರೆಸ್ ಘಟಕದ ಅಧ್ಯಕ್ಷ ರಿಪುನ್ ಬೋರಾ, ರಾಜ್ಯ ಉಸ್ತುವಾರಿ ನಾಯಕ ಜಿತೇಂದ್ರ ಸಿಂಗ್ ಅವರು ಜತೆಗಿದ್ದರು.
2019ರಲ್ಲಿ ಸಿಎಎ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗೆ ಅಸ್ಸಾಂ ಸಾಕ್ಷಿಯಾಗಿತ್ತು. ಐದು ಜನರು ಪ್ರಾಣ ಕಳೆದುಕೊಂಡಿದ್ದರು.
ಬಿಜೆಪಿ ನೀಡಿದ ಸುಳ್ಳು ಭರವಸೆಗಳಿಂದ ಜನರು ಬೇಸರಗೊಂಡಿರುವುದರಿಂದ ಕಾಂಗ್ರೆಸ್ ಮತ್ತು ಇತರ ಆರು ಪಕ್ಷಗಳ ಮೈತ್ರಿಕೂಟವು ಚುನಾವಣೆ ನಂತರ ಅಸ್ಸಾಂನಲ್ಲಿ ಸರ್ಕಾರ ರಚಿಸಲಿದೆ ಎಂದು ಪ್ರಿಯಾಂಕಾ ವಿಶ್ವಾಸದಿಂದ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.