ADVERTISEMENT

ರಾಜ್ಯಸಭೆ: ಮೂರಂಕಿ ತಲುಪಿದ ಬಿಜೆಪಿ ಸದಸ್ಯರ ಬಲ

ಪಿಟಿಐ
Published 1 ಏಪ್ರಿಲ್ 2022, 14:40 IST
Last Updated 1 ಏಪ್ರಿಲ್ 2022, 14:40 IST
ರಾಜ್ಯಸಭೆ (ಸಾಂದರ್ಭಿಕ ಚಿತ್ರ)
ರಾಜ್ಯಸಭೆ (ಸಾಂದರ್ಭಿಕ ಚಿತ್ರ)   

ನವದೆಹಲಿ: ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯ ಬಲ ಈಗ 100ಕ್ಕೆ ಏರಿದೆ. 1990ರ ನಂತರ ಯಾವುದೇ ಪಕ್ಷವು 100 ಸದಸ್ಯರನ್ನು ಹೊಂದಿದ ಹಿರಿಮೆಗೆ ಪಾತ್ರವಾಗಿರಲಿಲ್ಲ.

ಕಾಂಗ್ರೆಸ್ ಪಕ್ಷವು 1990ರಲ್ಲಿ 108 ಸದಸ್ಯರನ್ನು ಹೊಂದಿತ್ತು. ತದನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಆ ಪಕ್ಷದ ಸಂಖ್ಯಾಬಲ ಕ್ರಮೇಣ ಇಳಿಮುಖವಾಯಿತು. 2014ರಲ್ಲಿ ಬಿಜೆಪಿ ಸದಸ್ಯ ಬಲ 55 ಇತ್ತು, ಕ್ರಮೇಣ ಏರಿಕೆಯಾಗಿದೆ.

245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಿಜೆಪಿಯ ಬಲ 97 ಇತ್ತು. ಈಚೆಗೆ 13 ಸ್ಥಾನಗಳಿಗೆ ನಡೆದ ದ್ವೈವಾರ್ಷಿಕ ಚುನಾವಣಾ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಬಿಜೆಪಿ 3 ಸ್ಥಾನ ಗೆದ್ದಿದೆ. ಇದರೊಂದಿಗೆ ಪಕ್ಷದ ಒಟ್ಟು ಬಲ ಮೂರಂಕಿಗೆ ತಲುಪಿದೆ.

ADVERTISEMENT

ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆಯ ಫಲಿತಾಂಶಗಳ ನಂತರದ ಪಕ್ಷಗಳ ಬಲಾಬಲ ಪಟ್ಟಿ ರಾಜ್ಯಸಭೆಯ ವೆಬ್‌ಸೈಟ್‌ನಲ್ಲಿ ಇನ್ನೂ ಪರಿಷ್ಕರಣೆಗೊಳ್ಳಬೇಕಿದೆ.

ಬಿಜೆಪಿಯ 100 ಸದಸ್ಯರ ಬಲ ಮತ್ತೆ ಏರುಪೇರಾಗುವ ಸಂಭವವಿದೆ. ಶೀಘ್ರದಲ್ಲಿಯೇ ಆಂಧ್ರಪ್ರದೇಶ, ಛತ್ತೀಸಗಡ, ಮಹಾರಾಷ್ಟ್ರ, ರಾಜಸ್ಥಾನ, ಜಾರ್ಖಂಡ್ ರಾಜ್ಯಗಳಿಂದ ರಾಜ್ಯಸಭೆಯ 52 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ನಿವೃತ್ತಿ ಆಗಲಿರುವ ಸದಸ್ಯರಲ್ಲಿ 11 ಮಂದಿ ಉತ್ತರ ಪ್ರದೇಶದಿಂದ ಆಯ್ಕೆಯಾಗಿದ್ದವರು. ಸದ್ಯದ ಸ್ಥಿತಿಯಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿಯು 8 ಸ್ಥಾನ ಗೆಲ್ಲಲು ಶಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.