ADVERTISEMENT

ಎಲ್ಲ ರಾಜ್ಯಗಳಲ್ಲಿ ಯುಸಿಸಿ ಜಾರಿಗೆ ಕ್ರಮ: ಅಮಿತ್ ಶಾ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2024, 22:54 IST
Last Updated 17 ಡಿಸೆಂಬರ್ 2024, 22:54 IST
ಅಮಿತ್ ಶಾ
ಅಮಿತ್ ಶಾ   

ನವದೆಹಲಿ: ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಲ್ಲೂ ಏಕರೂಪದ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸಲು ಕ್ರಮವಹಿಸಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ರಾಜ್ಯಸಭೆಯಲ್ಲಿ ತಿಳಿಸಿದರು.

ಸಂವಿಧಾನ ಕುರಿತ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಅವರು ‘ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಲು’ ಮತ್ತು ‘ಅಧಿಕಾರದಲ್ಲಿ ಉಳಿಯಲು’ ಈ ಹಿಂದೆ ಕಾಂಗ್ರೆಸ್‌ ಸರ್ಕಾರವು ಸಂವಿಧಾನಕ್ಕೆ ತಿದ್ದುಪಡಿಯನ್ನು ತಂದಿತ್ತು ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ಪಕ್ಷವು ಸಂವಿಧಾನವನ್ನು ‘ಖಾಸಗಿ ಆಸ್ತಿ’ ಎಂಬಂತೆ ನೋಡಿದೆ. ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವ ಸಲುವಾಗಿ ಶೇ 50 ಮಿತಿಯನ್ನು ದಾಟಲು ಯತ್ನಿಸಿತ್ತು. ಆ ಪಕ್ಷವು ಎಂದಿಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಆದ್ಯತೆ ನೀಡಲಿಲ್ಲ ಎಂದು ಆರೋಪಿಸಿದರು.

ADVERTISEMENT

‘ಯುಸಿಸಿ ಕುರಿತಂತೆ ಪ್ರಸ್ತುತ ಕಾನೂನು ಮತ್ತು ಸಾಮಾಜಿಕ ಚರ್ಚೆ ನಡೆದಿದೆ. ಸಲಹೆಗಳೂ ಬರುತ್ತಿವೆ. ನಾವು ಕೆಲವನ್ನು ಒಪ್ಪಲೂಬಹುದು. ಆ ಬಳಿಕ ಪ್ರತಿ ರಾಜ್ಯದಲ್ಲೂ ಯುಸಿಸಿ ಅನ್ನು ಜಾರಿಗೆ ತರುತ್ತೇವೆ’ ಎಂದು ಪ್ರತಿಪಾದಿಸಿದರು.

ರಾಜ್ಯಸಭೆಯಲ್ಲಿ ಸಂವಿಧಾನ ಕುರಿತ ಚರ್ಚೆಗೆ ಒಂದೂವರೆ ಗಂಟೆ ಕಾಲ ಉತ್ತರಿಸಿದ ಅವರು, 1973ರಿಂದ 2016ರವರೆಗೆ ಸುಪ್ರೀಂ ಕೋರ್ಟ್ ಮತ್ತು ರಾಜ್ಯಗಳಿಂದ ಯುಸಿಸಿ ಜಾರಿಗೆ 11 ಬಾರಿ ಸಲಹೆ ಬಂದಿತ್ತು. ಕಾಂಗ್ರೆಸ್‌ ನೇತೃತ್ವದ ಆಗಿನ ಸರ್ಕಾರ ಎಲ್ಲವನ್ನೂ ತಳ್ಳಿಹಾಕಿತ್ತು ಎಂದರು.

ಕಳೆದ 75 ವರ್ಷಗಳಲ್ಲಿ ಕಾಂಗ್ರೆಸ್‌ ಪಕ್ಷ ಸಂವಿಧಾನದ ಹೆಸರಿನಲ್ಲಿ ವಂಚಿಸಿದೆ. ನೆಹರೂ–ಗಾಂಧಿ ಕುಟುಂಬವು ಪಕ್ಷವನ್ನಷ್ಟೇ ಅಲ್ಲ, ಸಂವಿಧಾನವನ್ನೂ ಖಾಸಗಿ ಆಸ್ತಿ ಎಂಬಂತೆ ಪರಿಗಣಿಸಿತ್ತು. ಸಂಸತ್ತಿನ ಅನುಮೋದನೆ ಇಲ್ಲದೆ ವಿಧಿ 35ಎ ಸೇರಿಸಲಾಗಿತ್ತು ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.