ADVERTISEMENT

ಕಬ್ಬಿನ ಖರೀದಿ ದರ ಏರಿಕೆಯು ಬಿಜೆಪಿಯ ಸ್ವಾರ್ಥ ನಡೆ: ಮಾಯಾವತಿ‌

ಚುನಾವಣೆ ಹಿನ್ನೆಲೆ

ಪಿಟಿಐ
Published 27 ಸೆಪ್ಟೆಂಬರ್ 2021, 10:29 IST
Last Updated 27 ಸೆಪ್ಟೆಂಬರ್ 2021, 10:29 IST
ಮಾಯಾವತಿ
ಮಾಯಾವತಿ   

ಲಖನೌ: ಉತ್ತರ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ 'ಸ್ವಾರ್ಥ'ಉದ್ದೇಶಗಳೊಂದಿಗೆ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಕಬ್ಬು ಖರೀದಿಯ ದರವನ್ನು ಹೆಚ್ಚಿಸಿದೆ ಎಂದು ಬಹುಜನ ಸಮಾಜವಾದಿ (ಬಿಎಸ್‌ಪಿ) ಪಕ್ಷದ ಮುಖ್ಯಸ್ಥೆ ಮಾಯಾವತಿ ಆರೋಪಿಸಿದ್ದಾರೆ.

‘ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜಾತಿ ಆಧಾರದ ಮೇಲೆ ಸಚಿವ ಸಂಪುಟ ವಿಸ್ತರಣೆಯ ಪ್ರಯತ್ನ ಮಾಡಿದ್ದಾರೆ. ಇಂಥ ಹಲವು ಬೆಳವಣಿಗೆಗಳ ಬಗ್ಗೆ ಮತದಾರರು ಜಾಗೃತರಾಗಿರಬೇಕು‘ ಎಂದು ಮಾಯಾವತಿ ಎಚ್ಚರಿಸಿದರು.

ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು, ‘ಉತ್ತರ ಪ್ರದೇಶದ ಬಿಜೆಪಿ ನೇತೃತ್ವದ ಸರ್ಕಾರ ಕಳೆದ ನಾಲ್ಕೂವರೆ ವರ್ಷಗಳಿಂದ ಕಬ್ಬಿನ ಬೆಲೆ ಹೆಚ್ಚಿಸದೇ, ರೈತರನ್ನು ನಿರ್ಲಕ್ಷ್ಯಿಸುತ್ತಲೇ ಬಂದಿದೆ. ಸೆಪ್ಟೆಂಬರ್‌ 7ರಂದು ಲಖನೌದಲ್ಲಿ ನಡೆದ ಪ್ರಬುದ್ಧ ವರ್ಗಗಳ ಸಮಾವೇಶದಲ್ಲಿ ನಾನು ಈ ವಿಷಯದ ಬಗ್ಗೆ ಗಮನ ಸೆಳೆದಿದ್ದೆ. ಈಗ ಸರ್ಕಾರ ಕಬ್ಬು ಬೆಳೆಯುವ ರೈತರನ್ನು ನೆನಪಿಸಿಕೊಂಡಿದೆ. ಚುನಾವಣೆ ಸಮೀಪದಲ್ಲಿರುವಾಗ ರೈತರನ್ನು ನೆನಪಿಸಿಕೊಳ್ಳುವುದು, ಆ ಪಕ್ಷದಲ್ಲಿರುವ ಸ್ವಾರ್ಥ ಮನೋಭಾವವನ್ನು ತೋರಿಸುತ್ತದೆ'ಎಂದು ಹೇಳಿದ್ದಾರೆ.

ADVERTISEMENT

ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳಿಂದಾಗಿ ಇಡೀ ಕೃಷಿಕ ಸಮಾಜವೇ ತೊಂದರೆಯಲ್ಲಿ ಸಿಲುಕಿದೆ. ಆದರೆ, ಚುನಾವಣೆಯಲ್ಲಿ ಮುಖ ಉಳಿಸಿಕೊಳ್ಳುವುದಕ್ಕಾಗಿ ಕಬ್ಬಿನ ದರ ಏರಿಸಿರುವುದು ಕೃಷಿ ಕ್ಷೇತ್ರಲ್ಲಿರುವ ಮೂಲ ಸಮಸ್ಯೆಗೆ ಸೂಕ್ತ ಪರಿಹಾರವಲ್ಲ. ರೈತರು ಇಂಥ ಆಮಿಷಗಳಿಗೆ ಬಲಿಯಾಗಬಾರದು‘ ಎಂದು ಮಾಯಾವತಿ ಹೇಳಿದರು.

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಪ್ರತಿ ಕ್ವಿಂಟಲ್ ಕಬ್ಬಿಗೆ ₹25 ದರವನ್ನು ಹೆಚ್ಚಿಸಿರುವುದಾಗಿ ಭಾನುವಾರ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.