ADVERTISEMENT

ಮುಜಪ್ಫರ್‌ನಗರ ಗಲಭೆಕೋರರಿಗೆ ಟಿಕೆಟ್: ಅಖಿಲೇಶ್‌ಗೆ ತಿವಿದ ಮೋದಿ

ಉತ್ತರ ಪ್ರದೇಶ ಪ್ರಚಾರ ರ‍್ಯಾಲಿಯಲ್ಲಿ ಎಸ್‌ಪಿ ವಿರುದ್ಧ ಮೋದಿ ವಾಗ್ದಾಳಿ l ಕರ್ನಾಟಕದ ಹಿಜಾಬ್ ವಿವಾದ ಪ್ರಸ್ತಾಪ

ಪಿಟಿಐ
Published 10 ಫೆಬ್ರುವರಿ 2022, 20:20 IST
Last Updated 10 ಫೆಬ್ರುವರಿ 2022, 20:20 IST
ಸಹರನ್‌ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ನಾಯಕರು ನೇಗಿಲ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದರು –ಪಿಟಿಐ ಚಿತ್ರ
ಸಹರನ್‌ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ನಾಯಕರು ನೇಗಿಲ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದರು –ಪಿಟಿಐ ಚಿತ್ರ   

ಸಹರನ್‌ಪುರ (ಉತ್ತರ ಪ್ರದೇಶ) (ಪಿಟಿಐ): ಉತ್ತರ ಪ್ರದೇಶ ವಿಧಾನಸಬಾ ಚುನಾವಣೆಯ ಮೊದಲ ಹಂತದಲ್ಲಿ ಮುಜಪ್ಫರ್‌ನಗರದಲ್ಲಿ ಮತದಾನ ನಡೆಯುತ್ತಿರುವ ಸಂದರ್ಭದಲ್ಲಿಯೇ, ರಾಜ್ಯದ ಸಹರನ್‌ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2013ರ ಮುಜಪ್ಫರ್‌ನಗರ ಗಲಭೆಯ ಬಗ್ಗೆ ಮಾತನಾಡಿದ್ದಾರೆ. ಕರ್ನಾಟಕದಲ್ಲಿನ ಹಿಜಾಬ್‌ ವಿವಾದವನ್ನೂ ಅವರು ತಮ್ಮ ಚುನಾವಣಾ ಪ್ರಚಾರದಲ್ಲಿ ಪ್ರಸ್ತಾಪಿಸಿದ್ದಾರೆ.

ಇಲ್ಲಿ ನಡೆದ ಭೌತಿಕ ಪ್ರಚಾರ ರ‍್ಯಾಲಿಯಲ್ಲಿ ಮೋದಿ ಅವರು ಮಾತನಾಡಿದ್ದಾರೆ.‘ಸಮಾಜವಾದಿ ಪಕ್ಷವು ಅಧಿಕಾರದಲ್ಲಿ ಇದ್ದಾಗ ರಾಜ್ಯದಲ್ಲಿ ಕೋಮುಗಲಭೆಗಳು ನಡೆಯುತ್ತಿದ್ದವು. 2013ರ ಮುಜಪ್ಫರ್‌ನಗರದ ಗಲಭೆಯನ್ನು ಯಾರು ಮರೆಯಲು ಸಾಧ್ಯ? ಕೈರಾನಾದಿಂದ ಹಿಂದೂಗಳನ್ನು ಓಡಿಸಿದ್ದನ್ನು ಯಾರೂ ಮರೆತಿಲ್ಲ. ಕರ್ಫ್ಯೂ ಎಂಬುದು ಸಾಮಾನ್ಯ ಎಂಬಂತಾಗಿತ್ತು. ಹಬ್ಬಗಳನ್ನು ಆಚರಿಸಲೂ ಅವಕಾಶವಿರಲಿಲ್ಲ. ಆ ಸರ್ಕಾರವು ಕನ್ವರ್ ಯಾತ್ರೆಯನ್ನು ನಿಷೇಧಿಸಿತ್ತು. ನಾವು ಕನ್ವರ್ ಯಾತ್ರೆಗೆ ಮತ್ತೆ ಚಾಲನೆ ನೀಡಿದ್ದೇವೆ. ಈಗ ಅದನ್ನು ತಡೆಯುವ ಧೈರ್ಯ ಯಾರಿಗೂ ಇಲ್ಲ’ ಎಂದು ಮೋದಿ ಹೇಳಿದ್ದಾರೆ.

ಕರ್ನಾಟಕದಲ್ಲಿನ ಹಿಜಾಬ್ ವಿವಾದದ ಬಗ್ಗೆ ಮಾತನಾಡಿರುವ ಮೋದಿ ಅವರು, ‘ಹಿಜಾಬ್ ವಿಚಾರದಲ್ಲಿ ಮುಸ್ಲಿಂ ವಿದ್ಯಾರ್ಥಿಗಳನ್ನು ವಿರೋಧ ಪಕ್ಷಗಳು ಪ್ರಚೋದಿಸುತ್ತಿವೆ. ನಮ್ಮ ಮುಸ್ಲಿಂ ಸೋದರಿಯರು ಮತ್ತು ಪುತ್ರಿಯರು ಪ್ರಗತಿ ಸಾಧಿಸುವುದು ವಿರೋಧ ಪಕ್ಷಗಳಿಗೆ ಬೇಕಾಗಿಲ್ಲ. ಮುಸ್ಲಿಂ ಸೋದರಿಯರು ಹಿಂದುಳಿಯಬೇಕು ಎಂದು ವಿರೋಧ ಪಕ್ಷಗಳು ಬಯಸುತ್ತಿವೆ. ಆದರೆ ನಾವು ಎಲ್ಲಾ ಮುಸ್ಲಿಂ ಮಹಿಳೆಯರ ಬೆಂಬಲಕ್ಕೆ ನಿಂತಿದ್ದೇವೆ’ ಎಂದು ಹೇಳಿದ್ದಾರೆ.

ADVERTISEMENT

‘ಮುಸ್ಲಿಂ ಮಹಿಳೆಯರಿಗೆ ರಕ್ಷಣೆ ದೊರೆಯಬೇಕು ಎನ್ನುವುದಾದರೆ, ಉತ್ತರ ಪ್ರದೇಶದಲ್ಲಿ ಮತ್ತೆ ಯೋಗಿಜೀ ಅವರ ಸರ್ಕಾರ ಬರಬೇಕು. ತ್ರಿವಳಿ ತಲಾಖ್ ನಿಷೇಧಿಸುವ ಮೂಲಕ ನಾವು ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸಿದ್ದೇವೆ. ಬಿಜೆಪಿ ಸರ್ಕಾರವಿದ್ದರೆ ಮಾತ್ರ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇರುತ್ತದೆ ಮತ್ತು ಅಪರಾಧಿಗಳು ಜೈಲಿನಲ್ಲಿ ಇರುತ್ತಾರೆ’ ಎಂದು ಮೋದಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಪ್ರಚಾರದ ವೇಳೆ ಮಾತನಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸುತ್ತದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ನಿಂದ ರಾವತ್ ಚಿತ್ರ ದುರ್ಬಳಕೆ: ಮೋದಿ

ಶ್ರೀನಗರ್ (ಉತ್ತರಾಖಂಡ) (ಪಿಟಿಐ): ‘ದೇಶದ ಮೊದಲ ಸೇನಾಪಡೆಗಳ ಮುಖ್ಯಸ್ಥ (ಸಿಡಿಎಸ್‌) ಜನರಲ್ ಬಿಪಿನ್ ರಾವತ್ ಅವರು ಜೀವಂತವಿದ್ದಾಗ ಕಾಂಗ್ರೆಸ್‌ ಅವರನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿತ್ತು. ಈಗ ಮರಣಾನಂತರ ಅವರ ಕಟೌಟ್‌ಗಳನ್ನು ಬಳಸಿಕೊಂಡು ಮತ ಯಾಚಿಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಚುನಾವಣಾ ರ‍್ಯಾಲಿಉದ್ದೇಶಿಸಿ ಮಾತನಾಡಿದ ಅವರು, ‘ರಾವತ್ ನೇತೃತ್ವದಲ್ಲಿ ಸೇನೆಯು ನಿರ್ದಿಷ್ಟ ದಾಳಿ ನಡೆಸಿದಾಗ, ಕಾಂಗ್ರೆಸ್‌ ನಾಯಕರು ಪುರಾವೆ ಕೇಳಿದ್ದರು. ರಾವತ್ ಅವರನ್ನು ಸಿಡಿಎಸ್‌ ಆಗಿ ನೇಮಕ ಮಾಡಿದಾಗ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ ಈಗ ಮತಕ್ಕಾಗಿ ಅವರ ಕಟೌಟ್‌ ಅನ್ನು ದುರ್ಬಳಕೆ ಮಾಡಿಕೊಳ್ಳು ತ್ತಿದೆ’ ಎಂದು ಟೀಕಿಸಿದ್ದಾರೆ.

‘ಕಾಂಗ್ರೆಸ್‌ ಎಸಗಿದ ಈ ತಪ್ಪು ಗಳಿಗೆ ರಾಜ್ಯದ ಜನ ಸರಿಯಾದ ಉತ್ತರವನ್ನು ಮತದಾನದ ಮೂಲಕ ನೀಡಬೇಕು. ರಾಜ್ಯದ ಅಭಿವೃದ್ಧಿಯನ್ನು ಆರಂಭಿಸಿರುವ ಬಿಜೆಪಿಯನ್ನೇ ಮತ್ತೆ ಅಧಿಕಾರಕ್ಕೆ ತನ್ನಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.