ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್
ಧರ್ಮಪುರಿ (ತಮಿಳುನಾಡು): ಲೋಕಸಭಾ ಚುನಾವಣೆ ಸೋಲಿನಿಂದ ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರ ಪಾಠ ಕಲಿತಿಲ್ಲ ಎಂದು ಹೇಳಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ರಾಜ್ಯದ ಪ್ರಮುಖ ಯೋಜನೆಗಳಿಗೆ ಕೇಂದ್ರ ಹಣ ಮಂಜೂರು ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
‘ಮಕ್ಕಳುಡನ್ ಮುದಲ್ವರ್’ (ಜನರೊಂದಿಗೆ ಸಿಎಂ) ಅನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸುವ ಯೋಜನೆಗೆ ಚಾಲನೆ ನೀಡಿದ ಸ್ಟಾಲಿನ್, ಈ ಯೋಜನೆಯ ಮೂಲಕ ರಾಜ್ಯದ ಯಾರಿಗೂ ಯಾವುದೇ ಕುಂದುಕೊರತೆ ಉಂಟಾಗದಂತೆ ನೋಡಿಕೊಳ್ಳಲು ಸರ್ಕಾರ ಶ್ರಮಿಸುತ್ತಿದೆ ಎಂದು ಹೇಳಿದ್ದಾರೆ.
ಜನರಿಗಾಗಿ ಇಂತಹ ಬದ್ಧತೆಯ ಕೆಲಸ ಮಾಡುತ್ತಿರುವುದರಿಂದ ವಿರೋಧ ಪಕ್ಷಗಳಿಗೆ ಅಸೂಯೆ ಮತ್ತು ಕಿರಿಕಿರಿ ಉಂಟಾಗುತ್ತಿದೆ. ಆದ್ದರಿಂದಲೇ ಅಪಪ್ರಚಾರದ ಮೂಲಕ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರ 2024ರ ಲೋಕಸಭಾ ಚುನಾವಣೆ ಸೋಲು ಮತ್ತು ರಾಜ್ಯದಲ್ಲಿ ಹಿಂದಿನ ಚುನಾವಣೆಗಳಲ್ಲಿನ ನಿರಂತರ ಸೋಲುಗಳಿಂದ ಪಾಠ ಕಲಿತಿಲ್ಲ ಎಂದು ಸ್ಟಾಲಿನ್ ಹೇಳಿದ್ದಾರೆ.
ಚೆನ್ನೈನಲ್ಲಿ ಮೆಟ್ರೊ ರೈಲು ಹಂತ–2 ಸೇರಿದಂತೆ ತಮಿಳುನಾಡಿನ ಪ್ರಮುಖ ಯೋಜನೆಗಳಿಗೆ ಅನುದಾನ ನೀಡುವ ಮನಸ್ಸನ್ನು ಕೇಂದ್ರ ಸರ್ಕಾರ ಹೊಂದಿಲ್ಲ. ಕಳೆದ 10 ವರ್ಷಗಳ ಆಡಳಿತದಲ್ಲಿ ರಾಜ್ಯದಲ್ಲಿ ಯಾವುದೇ ದೊಡ್ಡ ಯೋಜನೆಯನ್ನು ಜಾರಿಗೆ ತಂದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ನಾವು ಜನರೊಂದಿಗೆ ಇದ್ದೇವೆ ಮತ್ತು ಜನರು ನಮ್ಮೊಂದಿಗಿದ್ದಾರೆ. ಇದು ನಮ್ಮ ಯಶಸ್ಸಿನ ಗುಟ್ಟು ಮತ್ತು ತಮಿಳುನಾಡಿನ ಪ್ರಗತಿಯ ರಹಸ್ಯವಾಗಿದೆ’ ಎಂದು ಸ್ಟಾಲಿನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.