ADVERTISEMENT

ಮಧ್ಯ ಪ್ರದೇಶದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆ: ಬಿಜೆಪಿ ವಶದಲ್ಲಿ 8 ಶಾಸಕರು

ತಡರಾತ್ರಿ ನಡೆಯಿತು ಹೈ ಡ್ರಾಮಾ

ಏಜೆನ್ಸೀಸ್
Published 4 ಮಾರ್ಚ್ 2020, 2:40 IST
Last Updated 4 ಮಾರ್ಚ್ 2020, 2:40 IST
ಪ್ರದೇಶದ ಮುಖ್ಯಮಂತ್ರಿ ಕಮಲನಾಥ್
ಪ್ರದೇಶದ ಮುಖ್ಯಮಂತ್ರಿ ಕಮಲನಾಥ್   

ಗುರುಗ್ರಾಮ: ಮಧ್ಯ ಪ್ರದೇಶದಲ್ಲಿ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಮತ್ತು ಆ ಪಕ್ಷಕ್ಕೆ ಬೆಂಬಲ ನೀಡಿರುವ 8 ಶಾಸಕರು ಬಿಜೆಪಿ ವಶದಲ್ಲಿರುವುದು ವರದಿಯಾಗಿದೆ. ಈ ಪೈಕಿ ಒಬ್ಬ ಶಾಸಕಿಯನ್ನು ಮರಳಿ ಕರೆಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ ಎನ್ನಲಾಗಿದೆ.

ಈ ಶಾಸಕರನ್ನು ಹರಿಯಾಣದ ಗುರುಗ್ರಾಮದಲ್ಲಿರುವ ಐಟಿಸಿ ರೆಸಾರ್ಟ್‌ನಲ್ಲಿ ಬಿಜೆಪಿ ಬಲವಂತವಾಗಿ ಹಿಡಿದಿಟ್ಟುಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. 8 ಶಾಸಕರ ಪೈಕಿ ನಾಲ್ವರು ಕಾಂಗ್ರೆಸ್, ಒಬ್ಬ ಪಕ್ಷೇತರ ಮತ್ತು ಇತರ ಮೂವರು ಎಸ್‌ಪಿ, ಬಿಎಸ್‌ಪಿಯವರು ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

ಮಧ್ಯ ಪ್ರದೇಶದ ಸಚಿವ, ಕಾಂಗ್ರೆಸ್‌ ನಾಯಕರಾದ ಜಿತು ಪಟ್‌ವಾರಿ ಮತ್ತು ಜೈವರ್ಧನ್ ಸಿಂಗ್ ಅವರು ಐಟಿಸಿ ರೆಸಾರ್ಟ್‌ಗೆ ತೆರಳಿ ಉಚ್ಚಾಟಿತ ಬಿಎಸ್‌ಪಿ ಶಾಸಕಿ ರಮಾಬಾಯಿ ಅವರ ಜತೆ ತೆರಳುತ್ತಿರುವ ವಿಡಿಯೊವನ್ನು ಎಎನ್‌ಐ ಸುದ್ದಿ ಸಂಸ್ಥೆ ಮಂಗಳವಾರ ತಡರಾತ್ರಿ ಟ್ವೀಟ್ ಮಾಡಿದೆ.

ADVERTISEMENT

‘ನಮಗೆ ಮಾಹಿತಿ ದೊರೆತ ಕೂಡಲೇ ಜಿತು ಪಟ್‌ವಾರಿ ಮತ್ತು ಜೈವರ್ಧನ್ ಸಿಂಗ್ ಅಲ್ಲಿಗೆ (ಗುರುಗ್ರಾಮಕ್ಕೆ) ತೆರಳಿದ್ದಾರೆ. ಈಗ ನಮ್ಮ ಜತೆ ಸಂಪರ್ಕದಲ್ಲಿರುವ ಶಾಸಕರು ವಾಪಸ್ ಬರಲು ಒಪ್ಪಿದ್ದಾರೆ. ಬಿಸಾಹುಲಾಲ್ ಸಿಂಗ್ ಮತ್ತು ರಮಾಬಾಯಿ ಜತೆ ನಿನ್ನೆಯೇ ಸಂಪರ್ಕ ಸಾಧಿಸಿದ್ದೆವು. ಬಿಜೆಪಿ ತಡೆಯಲು ಯತ್ನಿಸಿದರೂ ರಮಾಬಾಯಿ ನಮ್ಮ ಜತೆ ಬಂದಿದ್ದಾರೆ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

‘ಬಿಜೆಪಿಯ ರಾಂಪಾಲ್ ಸಿಂಗ್, ನರೋತ್ತಮ್ ಮಿಶ್ರಾ, ಅರವಿಂದ ಬದೌರಿಯಾ ಮತ್ತು ಸಂಜಯ್ ಪಾಠಕ್ ಶಾಸಕರಿಗೆ ಹಣ ನೀಡುತ್ತಿದ್ದಾರೆ. ದಾಳಿ ನಡೆಸಿದ್ದರೆ ಅವರು ಸಿಕ್ಕಿಹಾಕಿಕೊಳ್ಳುತ್ತಿದ್ದರು. 10–11 ಶಾಸಕರು ಅಲ್ಲಿದ್ದ ಬಗ್ಗೆ ಅನುಮಾನವಿದೆ. ಆದರೆ ಸದ್ಯ ಅವರ (ಬಿಜೆಪಿ) ಜತೆ ನಾಲ್ವರಷ್ಟೇ ಇದ್ದಾರೆ. ಅವರೂ ವಾಪಸ್ ಬರಲಿದ್ದಾರೆ’ ಎಂದು ದಿಗ್ವಿಜಯ್ ಸಿಂಗ್ ಮಾಹಿತಿ ನೀಡಿದ್ದಾರೆ.

ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಪತ್ರಿಕಾಗೋಷ್ಠಿ ನಡೆಸಿ ವಿಸ್ತೃತ ಮಾಹಿತಿ ನೀಡಲಿದ್ದೇವೆ ಎಂದು ಜಿತು ಪಟ್‌ವಾರಿ ಹೇಳಿದ್ದಾರೆ.

ಈ ಮಧ್ಯೆ, ರಾಜಕೀಯ ಬೆಳವಣಿಗೆಗೆ ಸಂಬಂಧಿಸಿ ಮಧ್ಯ ಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ಪ್ರತಿಕ್ರಿಯಿಸಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ. ಸರ್ಕಾರಕ್ಕೆ ಏನೂ ಆಗುವುದಿಲ್ಲ. ನಮ್ಮ ಶಾಸಕರು ವಾಪಸ್ ಬರಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

230 ಸದಸ್ಯ ಬಲದ ಮಧ್ಯ ಪ್ರದೇಶ ವಿಧಾನಸಭೆಗೆ 2018ರ ಡಿಸೆಂಬರ್‌ನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ 114 ಸ್ಥಾನ ಗಳಿಸಿತ್ತು. ಬಿಜೆಪಿ 109 ಸ್ಥಾನ ಗಳಿಸಿದ್ದರೆ, ಪಕ್ಷೇತರರು 4, ಬಿಎಸ್‌ಪಿ 2, ಸ್ಥಾನ ಗಳಿಸಿದ್ದವು. ಎಸ್‌ಪಿ 1 ಸ್ಥಾನ ಪಡೆದಿತ್ತು. ಬಹುಮತಕ್ಕೆ 116 ಸ್ಥಾನ ಬೇಕಿದ್ದು ಬಿಎಸ್‌ಪಿ, ಇತರರ ಬೆಂಬಲದೊಂದಿಗೆ ಕಾಂಗ್ರೆಸ್ ಸರ್ಕಾರ ರಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.