ಬಿಜೆಪಿ ನಾಯಕ ಎಚ್.ರಾಜಾ
(ಚಿತ್ರ ಕೃಪೆ– Instagram/@hrajaofficial)
ಚೆನ್ನೈ: ಪೆರಿಯಾರ್ ಪ್ರತಿಮೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತು ಡಿಎಂಕೆ ಸಂಸದೆ ಕನಿಮೊಳಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣಗಳಲ್ಲಿ ಬಿಜೆಪಿ ನಾಯಕ ಎಚ್.ರಾಜಾ ಅವರನ್ನು ಇಲ್ಲಿನ ನ್ಯಾಯಾಲಯ ದೋಷಿ ಎಂದು ಹೇಳಿದ್ದು, ಶಿಕ್ಷೆ ವಿಧಿಸಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯೂ ಆಗಿರುವ ರಾಜಾ ಅವರಿಗೆ ಎರಡೂ ಪ್ರಕರಣಗಳಲ್ಲಿ ಆರು ತಿಂಗಳ ಸಾದಾ ಜೈಲು ಮತ್ತು ಒಟ್ಟು ₹6 ಸಾವಿರ ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ.
ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗುವಂತೆ ನ್ಯಾಯಾಲಯವು ಶಿಕ್ಷೆಯನ್ನು 30 ದಿನಗಳವರೆಗೆ ಅಮಾನತಿನಲ್ಲಿರಿಸಿದೆ. ತೀರ್ಪಿನ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರಾಜಾ, ‘ನಮ್ಮ ವಕೀಲರ ತಂಡವು ಮುಂದಿನ ಕಾನೂನು ಹೋರಾಟದ ಬಗ್ಗೆ ನಿರ್ಧರಿಸಲಿದೆ’ ಎಂದು ಹೇಳಿದರು.
2018ರಲ್ಲಿ ದುಷ್ಕರ್ಮಿಗಳು ಚೆನ್ನೈನಲ್ಲಿ ಪೆರಿಯಾರ್ ಅವರ ಪ್ರತಿಮೆ ಧ್ವಂಸಗೊಳಿಸಿದ್ದರು. ಅದಕ್ಕೆ ಸಂಬಂಧಿಸಿದಂತೆ ರಾಜಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ಸಂದೇಶ ವಿವಾದಕ್ಕೆ ಕಾರಣವಾಗಿತ್ತು. ಕನಿಮೊಳಿ ವಿರುದ್ಧ ಅವರು ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದರು.
‘ಪೆರಿಯಾರ್’ ಪ್ರತಿಮೆ ಧ್ವಂಸ ಕುರಿತು ಅವರು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ನ್ಯಾಯಾಲಯವು, ‘ಇಂತಹ ವಿಷಪೂರಿತ ಸಂದೇಶಗಳನ್ನು ನಮ್ಮ ಸಮಾಜದಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದೆ.
‘ರಾಜಾ ಅವರು ಪೋಸ್ಟ್ ಮಾಡಿರುವ ಸಂದೇಶವು ಪ್ರಚೋದನಕಾರಿಯಾಗಿದ್ದು, ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹದ್ದು. ಅದು ಗಲಭೆ ಮತ್ತು ಹಿಂಸೆಗೆ ಕಾರಣವಾಗಬಹುದು’ ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿ.ಜಯವೇಲ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.