ADVERTISEMENT

ಕಾಂಗ್ರೆಸ್‌ನಲ್ಲಿ ಈಗಲೂ ತುರ್ತುಪರಿಸ್ಥಿತಿಯ ಮನಸ್ಥಿತಿ: ಬಿಜೆಪಿ ಮುಖಂಡರ ತರಾಟೆ

ತುರ್ತು ಪರಿಸ್ಥಿತಿಯ 45ನೇ ವರ್ಷದ ನೆನಪು

ಪಿಟಿಐ
Published 25 ಜೂನ್ 2020, 12:39 IST
Last Updated 25 ಜೂನ್ 2020, 12:39 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ತುರ್ತು ಪರಿಸ್ಥಿತಿಯ 45ನೇ ವರ್ಷದ ನೆನಪಿನ ಹಿನ್ನೆಲೆಯಲ್ಲಿ ಹಿರಿಯ ಬಿಜೆಪಿ ನಾಯಕರು ಗುರುವಾರ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದು, ‘ತುರ್ತುಸ್ಥಿತಿಯ ಮನಸ್ಥಿತಿ ಹಾಗೂ ಒಂದು ಕುಟುಂಬದ ಹಿತಾಸಕ್ತಿ ಕುರಿತ ಚಿಂತನೆ ಇನ್ನೂ ಕಾಂಗ್ರೆಸ್‌ನಲ್ಲಿದೆ’ ಎಂದಿದ್ದಾರೆ.

ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದಾಗ ಜೂನ್‌ 25, 1975ರಂದು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದ್ದು ಜನರ ಹಕ್ಕುಗಳು ಹಾಗೂ ಚುನಾವಣೆಯ ಮೇಲೆ ನಿರ್ಬಂಧ ಹೇರಲಾಗಿತ್ತು. ತುರ್ತು ಪರಿಸ್ಥಿತಿ ಮಾರ್ಚ್‌ 21, 1977ರವರೆವಿಗೂ ಜಾರಿಯಲ್ಲಿತ್ತು.

ಪ್ರಧಾನಿ ಮೋದಿ ಈ ಕುರಿತು ಟ್ವೀಟ್ ಮಾಡಿ ಕಾಂಗ್ರೆಸ್ ಪಕ್ಷವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಇನ್ನೊಂದಡೆ, ಗೃಹ ಸಚಿವ ಅಮಿತ್ ಶಾ ಮತ್ತು ಇತರೆ ಮುಖಂಡರು ಕೂಡಾ ಕಾಂಗ್ರೆಸ್‌ ಪ‍ಕ್ಷದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ADVERTISEMENT

ಅಮಿತ್‌ ಶಾ ಅವರು, ‘ಒಂದು ಕುಟುಂಬ’ದ ಹಿತಾಸಕ್ತಿ ಆ ಪಕ್ಷವನ್ನು ಬಾಧಿಸುತ್ತಿದೆ. ಈಗಲೂ ಆ ಪಕ್ಷದಲ್ಲಿ ತುರ್ತು ಪರಿಸ್ಥಿತಿ ಮನಸ್ಥಿತಿಯೇ ಏಕಿದೆ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಮುಖಂಡರಿಗೆ ಉಸಿರುಗಟ್ಟುವ ಸ್ಥಿತಿ ಇರುವುದು ಕಹಿಯಾದ ಸತ್ಯ’ ಎಂದಿದ್ದಾರೆ.

‘45 ವರ್ಷದ ಹಿಂದೆ ಈ ದಿನ ಅಧಿಕಾರಕ್ಕಾಗಿ ಹಪಾಹಪಿಸಿದ್ದ ಕುಟುಂಬವು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿತು. ದಿನಬೆಳಗಾಗುವುದರಲ್ಲಿ ದೇಶದಲ್ಲಿ ವಿಷಮ ಸ್ಥಿತಿ ನಿರ್ಮಾಣವಾಯಿತು. ಮಾಧ್ಯಮ, ನ್ಯಾಯಾಲಯ, ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಕಸಿಯಲಾಯಿತು. ಬಡ, ಕೆಳವರ್ಗದವರ ಮೇಲೆ ಶೋಷಣೆ ನಡೆಯಿತು’ ಎಂದು ಈ ಕುರಿತ ಸರಣಿ ಟ್ವೀಟ್‌ನಲ್ಲಿ ಅವರು ಟೀಕಿಸಿದ್ದಾರೆ.

‘ಲಕ್ಷಾಂತರ ಜನರ ಶ್ರಮದ ಫಲವಾಗಿ ತುರ್ತು ಪರಿಸ್ಥಿತಿಯನ್ನು ಹಿಂದೆ ಪಡೆದು, ಪ್ರಜಾಪ್ರಭುತ್ವವನ್ನು ಮರು ಸ್ಥಾಪಿಸಲಾಯಿತು. ಆದರೆ, ಆ ಮನಸ್ಥಿತಿ ಇನ್ನೂ ಕಾಂಗ್ರೆಸ್‌ನಲ್ಲಿದೆ. ಒಂದು ಕುಟುಂಬದ ಹಿತಾಸಕ್ತಿಯೇ ಮುಖ್ಯವಾಗಿರುವುದು ಆ ಪಕ್ಷದ ದುಃಸ್ಥಿತಿ’ ಎಂದು ಕುಟುಕಿದ್ದಾರೆ.

ದನಿಯನ್ನು ಅಡಗಿಸುವ ಸ್ಥಿತಿ ಈಗಲೂ ಆ ಪಕ್ಷದಲ್ಲಿದೆ ಎಂದಿರುವ ಅವರು, ಕಾಂಗ್ರೆಸ್ ಪಕ್ಷ ತನ್ನ ವಕ್ತಾರರನ್ನು ಬದಲಿಸಿದ ಇತ್ತೀಚಿನ ವಿದ್ಯಮಾನವನ್ನು ಉಲ್ಲೇಖಿಸಿದರು.

45 ವರ್ಷದ ಹಿಂದೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೊಂದವರೇ ಇಂದು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಟೀಕಿಸಿದರೆ, ರವಿಶಂಕರ್ ಪ್ರಸಾದ್ ಅವರು, ‘ತುರ್ತುಪರಿಸ್ಥಿತಿ ದಿನಗಳು ಹೊಸ ಪೀಳಿಗೆಗೆ ಉತ್ತಮ ಪಾಠ’ ಎಂದಿದ್ದಾರೆ.

ತಮಿಳುನಾಡಿನಲ್ಲಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ‘ಅಧಿಕಾರದ ಹಸಿವಿನ’ ಕಾಂಗ್ರೆಸ್‌ ಸರ್ಕಾರ ಆಗ ಜನರ ಹಕ್ಕುಗಳನ್ನು ಕಸಿದುಕೊಂಡಿತ್ತು. ಇಂದು ಅದೇ ಪಕ್ಷ ಪ್ರಜಾಪ್ರಭುತ್ವ ಕುರಿತು ಮಾತನಾಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.