ADVERTISEMENT

ನಿತೀಶ್‌ಕುಮಾರ್ ಓಲೈಕೆಗೆ ರಾಜ್ಯಸಭೆ ಉಪಾಧ್ಯಕ್ಷ ಸ್ಥಾನವೇ ಗಾಳ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2018, 10:17 IST
Last Updated 7 ಆಗಸ್ಟ್ 2018, 10:17 IST
   

ನವದೆಹಲಿ:ರಾಜ್ಯಸಭೆ ಉಪಾಧ್ಯಕ್ಷ ಸ್ಥಾನವನ್ನು ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಪಕ್ಷ ಜೆಡಿ(ಯು)ಗೆ ನೀಡಲು ಚಿಂತನೆ ನಡೆಸಿರುವ ಬಿಜೆಪಿ, ಕೊನೆಕ್ಷಣದ ಬದಲಾವಣೆಗೆ ಮುಂದಾಗಿದೆ. ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡಿರುವ ಬಿಜೆಪಿ, ನಿತೀಶ್‌ ಕುಮಾರ್‌ ಪಕ್ಷದ ಓಲೈಕೆಗೆ ತಂತ್ರ ರೂಪಿಸುತ್ತಿದೆ.

ಬಿಹಾರಕ್ಕೆ ವಿಶೇಷ ಸ್ಥಾನ ಹಾಗೂ ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ಮತ್ತು ತಮ್ಮ ಪಕ್ಷದ ಸದಸ್ಯರಿಗೆ ರೈಲ್ವೆ ಖಾತೆ ನೀಡಬೇಕೆಂಬ ಬೇಡಿಕೆಗಳೊಂದಿಗೆ ಎನ್‌ಡಿಎ ಮೈತ್ರಿ ಜತೆ ಮುನಿಸಿಕೊಂಡಿದ್ದ ನಿತೀಶ್ ಕುಮಾರ್‌ ಅವರನ್ನು ಶಾಂತವಾಗಿಸಲು ಬಿಜೆಪಿ ಪ್ರಯತ್ನ ಮುಂದುವರಿಸಿದೆ. ಈ ಸ್ಥಾನದ ಆಕಾಂಕ್ಷಿಯಾಗಿದ್ದಅಕಾಲಿದಳದ ನಾಯಕ ನರೇಶ್ ಗುಜ್ರಾಲ್‌ ಅವರನ್ನು ಕೈಬಿಟ್ಟು ಹಠಾತ್‌ ಬದಲಾವಣೆ ಮಾಡಿದೆ.

ರಾಜ್ಯಸಭೆಉಪಸಭಾಧ್ಯಕ್ಷ ಸ್ಥಾನಕ್ಕೆ ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿ(ಯು) ರಾಜ್ಯಸಭಾ ಸದಸ್ಯ ಹರಿವಂಶ್‌ ಅವರನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ.

ADVERTISEMENT

ಈ ಹಠಾತ್‌ ಬೆಳವಣಿಗೆ ಕುರಿತು ಬಿಜೆಪಿಗೆ ಸಂದೇಶವೊಂದನ್ನು ನೀಡುವ ಮಾರ್ಗೋಪಾಯಗಳ ಕುರಿತು ಅಕಾಲಿದಳ ಚರ್ಚಿಸುತ್ತಿದೆ. ಈ ಸಂಬಂಧ ಸೋಮವಾರ ಸಂಜೆ ಕೇಂದ್ರ ಸಚಿವೆ ಹರ್‌ ಸಿಮ್ರತ್‌ ಕೌರ್ ಬಾದಲ್‌ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಗುರುವಾರ ನಡೆಯುವ ಆಯ್ಕೆ ಪ್ರಕ್ರಿಯೆಯ ಮತದಾನದಿಂದ ದೂರವಿರುವ ನಿಲುವನ್ನು ಅಕಾಲಿದಳ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಇಂದು ರಾತ್ರಿ ವೇಳೆಗೆ ಈ ಬಗ್ಗೆ ಸ್ಪಷ್ಟ ನಿಲುವನ್ನು ಪ್ರಕಟಿಸುವ ಸಾಧ್ಯತೆ ಇದೆ.

ರಾಜ್ಯಸಭೆಯ ಒಟ್ಟು ಸದಸ್ಯರ ಸಂಖ್ಯೆ 245.ಅಕಾಲಿದಳದಸದಸ್ಯ ಬಲ ಕೇವಲ ಮೂರು. ಉಪಾಧ್ಯಕ್ಷ ಸ್ಥಾನ ಗೆಲ್ಲಲು ಬೇಕಿರುವ ಮತಗಳ ಸಂಖ್ಯೆ 123. ಇವರು ಮತದಾನದಿಂದ ಹೊರಗೆ ಉಳಿದರೂ ಅಂತಿಮಫಲಿತಾಂಶದ ಮೇಲೆಪರಿಣಾಮ ಬೀರುವುದಿಲ್ಲ ಎಂಬ ಲೆಕ್ಕಾಚಾರ ಚಾಲ್ತಿಯಲ್ಲಿದೆ.

ರಾಜ್ಯಸಭೆಯಲ್ಲಿ ಅಕಾಲಿದಳದ ಸದಸ್ಯರನ್ನೂ ಒಳಗೊಂಡಂತೆಎನ್‌ಡಿಎ ಬಳಿ 110 ಸದಸ್ಯರ ಬಲವಿದೆ. ನವೀನ್‌ ಪಟ್ನಾಯಕ್‌ ಅವರ ಬಿಜೆಡಿ ಮತ್ತು ಕೆ. ಚಂದ್ರಶೇಖರ್‌ ರಾವ್‌ ಅವರ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್‌)ಪಕ್ಷಗಳ 15 ಮತಗಳು ಸೇರಿದರೆ ಎನ್‌ಡಿಎಗೆ 125 ಮತಗಳು ಸಿಗುತ್ತವೆ.ಅಕಾಲಿ ದಳದ ಸದಸ್ಯರು ಗೈರಾದರೆ ಗೆಲುವಿಗೆ ಬೇಕಿರುವ ಮ್ಯಾಜಿಕ್‌ ಸಂಖ್ಯೆ 123ರಿಂದ 121ಕ್ಕೆ ಇಳಿಯಲಿದೆ.

ಸಂಸತ್ತಿನ ಆಚೆಗೂಈ ಬೆಳವಣಿಗೆ ಬೀರಬಹುದಾದ ಪರಿಣಾಮದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.ಪಂಜಾಬ್‌ನಲ್ಲಿ ಅಕಾಲಿದಳದೊಂದಿಗೆ ಮಾಡಿಕೊಂಡಿರುವ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಳ್ಳುವ ಅಪಾಯ ಎದುರಾಗಿದೆ. ಆದರೆ ಬಿಹಾರದಲ್ಲಿ ಬಿಜೆಪಿಯಿಂದ ದೂರ ಸರಿದಿರುವ ನಿತೀಶ್‌ ಅವರನ್ನು ಮತ್ತೆ ಓಲೈಸಲು ಈ ಬೆಳವಣಿಗೆ ಕಾರಣವಾಗಬಹುದು.

ರಾಜ್ಯಸಭೆಯ ‘ಉಪಸಭಾಧ್ಯಕ್ಷ ಸ್ಥಾನಕ್ಕೆ ಆಗಸ್ಟ್‌ 9ರ ಬೆಳಿಗ್ಗೆ 11ಕ್ಕೆ ಚುನಾವಣೆ ನಡೆಯಲಿದೆ’ ಎಂದು ಸಭಾಧ್ಯಕ್ಷ ಎಂ.ವೆಂಕಯ್ಯನಾಯ್ಡು ಅವರು ಸೋಮವಾರ ಘೋಷಿಸಿದ್ದರು.

ಉಪಸಭಾಧ್ಯಕ್ಷ ಅಭ್ಯರ್ಥಿಯನ್ನು ಪರಸ್ಪರ ಸಮ್ಮತಿಯಿಂದ ಆಯ್ಕೆ ಮಾಡುವಂತೆ ನಾಯ್ಡು ಅವರು ಈ ಹಿಂದೆ ಸಲಹೆ ನೀಡಿದ್ದರು. ಇದರ ಹೊರತಾಗಿಯೂ, ವಿರೋಧ ಪಕ್ಷಗಳು ಕೂಡ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯಿದ್ದು, ಚುನಾವಣೆ ನಡೆಯುವುದು ಬಹುತೇಕ ಖಾತ್ರಿಯಾಗಿದೆ. ಆಗಸ್ಟ್‌ 8ರ ಮಧ್ಯಾಹ್ನದ ಒಳಗಾಗಿ ನಾಮಪತ್ರ ಸಲ್ಲಿಸಬೇಕು.

ರಾಜ್ಯಸಭಾ ಉಪಸಭಾಧ್ಯಕ್ಷರಾಗಿದ್ದ ಪಿ.ಜೆ.ಕುರಿಯನ್‌ ಅವರು ಕಳೆದ ಜುಲೈನಲ್ಲಿ ನಿವೃತ್ತಿಯಾಗಿದ್ದರು. ಇದಾದ ಬಳಿಕ ಈ ಸ್ಥಾನ ಖಾಲಿ ಉಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.