ADVERTISEMENT

ಪೊಲೀಸರಿಂದ ಬಿಡಿಸಲು ಹೆಣ್ಣು ಮಕ್ಕಳನ್ನು ಮಾರಾಟ ಮಾಡಲಾಗುತ್ತಿದೆ: ಸಾಧ್ವಿ ಪ್ರಗ್ಯಾ

ಪಿಟಿಐ
Published 21 ಸೆಪ್ಟೆಂಬರ್ 2022, 7:30 IST
Last Updated 21 ಸೆಪ್ಟೆಂಬರ್ 2022, 7:30 IST
ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್
ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್   

ಭೋಪಾಲ್‌: ಅಕ್ರಮ ಮದ್ಯ ಮಾರಾಟದಲ್ಲಿ ಭಾಗಿಯಾದ ಆರೋಪದಡಿ ಪೊಲೀಸ್‌ ವಶದಲ್ಲಿರುವ ಸಂಬಂಧಿಕರನ್ನು ಬಿಡಿಸಲು ಹೆಣ್ಣು ಮಕ್ಕಳನ್ನು ಪೋಷಕರು ಮಾರಾಟ ಮಾಡುತ್ತಿದ್ದಾರೆ ಎಂದು ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ನೀಡಿರುವ ಹೇಳಿಕೆ ಗಂಭೀರ ಸ್ವರೂಪ ಪಡೆದುಕೊಂಡಿದೆ.

ಪೊಲೀಸರಿಂದ ಸಂಬಂಧಿಕರನ್ನು ಬಿಡಿಸುವುದಕ್ಕಾಗಿ ಹಣ ಸಂಗ್ರಹಿಸಲು ಮನೆಯ ಹೆಣ್ಣು ಮಕ್ಕಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಪ್ರಗ್ಯಾ ಸಿಂಗ್ ಹೇಳಿಕೆ ನೀಡಿರುವ ವಿಡಿಯೊ ವೈರಲ್‌ ಆಗಿದೆ.

ಮಧ್ಯ ಪ್ರದೇಶ ವಿಧಾನಸಭೆಯ ಪ್ರತಿಪಕ್ಷ ನಾಯಕ ಗೋವಿಂದ ಸಿಂಗ್‌ ಅವರು ಆಘಾತ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಸಾಧ್ವಿ ಅವರ ಹೇಳಿಕೆಯಿಂದ ಆಘಾತವಾಗಿದೆ. ಇದು ಬಿಜೆಪಿ ಸರ್ಕಾರಕ್ಕೆ ನಾಚಿಕೆಗೇಡಿನ ವಿಚಾರ. ರಾಜ್ಯ ರಾಜಧಾನಿದಲ್ಲಿ ಪೊಲೀಸರ ಪ್ರೋತ್ಸಾಹದಲ್ಲಿ ಅಕ್ರಮ ಮದ್ಯ ವ್ಯಾಪರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ADVERTISEMENT

ಸೆ.17ರಂದು ಭಾರತೀಯ ಉದ್ಯೋಗ ವ್ಯಾಪಾರ ಮಂಡಳ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದೆ ಸಾಧ್ವಿ ಹೆಣ್ಣು ಮಕ್ಕಳ ಮಾರಾಟದ ಕುರಿತಾಗಿ ಹೇಳಿದ್ದಾರೆ.

ಶಿಕ್ಷಣ ಪಡೆಯಲು ಅಗತ್ಯ ಸೌಲಭ್ಯವನ್ನು ಹೊಂದಿರದ ಮಕ್ಕಳಿರುವ ಕೆಲವು ವಸಾಹತುಗಳನ್ನು ನಾನು ದತ್ತು ತೆಗೆದುಕೊಂಡಿದ್ದೇನೆ. ನಿತ್ಯವು ಅವರ ಪೋಷಕರಿಗೆ ಹಣ ಗಳಿಸಲು ಆಧಾರಗಳಿರುವುದಿಲ್ಲ. ಹಾಗಾಗಿ ಅಕ್ರಮ ಮದ್ಯ ಮಾರಾಟದಂತಹ ದಂಧೆಗೆ ಇಳಿಯುತ್ತಾರೆ. ಕೆಲವು ಸಂದರ್ಭಗಳಲ್ಲಿ ಪೊಲೀಸರು ಅವರನ್ನು ಬಂಧಿಸುತ್ತಾರೆ. ಜಾಮೀನು ಪಡೆಯಲು ಅವರ ಬಳಿ ಹಣವಿರುವುದಿಲ್ಲ. ಅವರು ತಮ್ಮ ಹೆಣ್ಣು ಮಕ್ಕಳನ್ನು ಮಾರಾಟ ಮಾಡುತ್ತಿದ್ದಾರೆ. 4-6 ವರ್ಷದವರನ್ನೂ ಮಾರಾಟ ಮಾಡಲಾಗುತ್ತಿದೆ. ತಮ್ಮವರನ್ನು ಪೊಲೀಸರಿಂದ ಬಿಡಿಸಿಕೊಂಡು ಬರುವುದಕ್ಕಾಗಿ ಹಣ ಸಂಗ್ರಹಿಸಲು ಹೀಗೆ ಮಾಡುತ್ತಿದ್ದಾರೆ ಎಂದು ಸಾಧ್ವಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.