ADVERTISEMENT

ಗುಂಡು ನಿರೋಧಕ ಜಾಕೆಟ್ ರಫ್ತು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 15:26 IST
Last Updated 13 ಮಾರ್ಚ್ 2020, 15:26 IST
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ    

ಬೆಂಗಳೂರು: 'ಕಳೆದ 20 ವರ್ಷಗಳಲ್ಲಿ ಕಾಂಗ್ರೆಸ್ ಸೇನೆಗಾಗಿ ಒಂದೇ ಒಂದು ಪಿಸ್ತೂಲ್ ಖರೀದಿಸಿರಲಿಲ್ಲ. ಬಿಜೆಪಿ ಸರ್ಕಾರ ಬಂದ ನಂತರ ನಮ್ಮ ಯೋಧರಿಗಾಗಿ 1.86 ಲಕ್ಷ ಗುಂಡು ನಿರೋಧಕ ಜಾಕೆಟ್ ಖರೀದಿಸಿದ್ದೇವೆ ಮಾತ್ರವಲ್ಲದೆ ಇಂತಹ ಜಾಕೆಟ್‌ಗಳನ್ನು ಈಗ ರಫ್ತು ಮಾಡುತ್ತಿದ್ದೇವೆ' ಎಂದು ಬಿಜೆಪಿಯ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು.

ಬೆಂಗಳೂರು ದಕ್ಷಿಣ ಜಿಲ್ಲೆಬಿಜೆಪಿ ಘಟಕದ ವತಿಯಿಂದ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ' 36 ರಫೇಲ್ ಯುದ್ಧವಿಮಾನಗಳು, ಅನೇಕ ಲಘು ಯುದ್ಧವಿಮಾನಗಳು, 5 ಲಕ್ಷ ರೈಫಲ್ ಗಳನ್ನು ಖರೀದಿಸುವ ಮೂಲಕ ಸೇನೆಯನ್ನು ಬಲಿಷ್ಠಗೊಳಿಸಲಾಗಿದೆ' ಎಂದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೂಪಿಸಿರುವ ಕಾನೂನುಗಳು ಮತ್ತು ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ, ವಿರೋಧ ಪಕ್ಷಗಳ ಟೀಕೆಗೆ ಪ್ರತ್ಯುತ್ತರ ನೀಡುವ ಪ್ರಯತ್ನ ಮಾಡಿದರು.

ADVERTISEMENT

370ನೇ ವಿಧಿ ರದ್ದು

'ಒಂದು ದೇಶದಲ್ಲಿ ಇಬ್ಬರು ಪ್ರಧಾನಿಗಳು (ಪ್ರಮುಖರು), ಎರಡು ಸಂವಿಧಾನ, ಎರಡು ಧ್ವಜಗಳ ಬದಲಿಗೆ ಒಬ್ಬನೇ ಪ್ರಧಾನಿ, ಒಂದೇ ಸಂವಿಧಾನ, ಒಂದೇ ಧ್ವಜ ಇರಬೇಕು ಎಂಬ ಸ್ಪಷ್ಟ ಕಲ್ಪನೆ ನಮಗಿತ್ತು. ಆ ಉದ್ದೇಶದಿಂದಲೇ, ಜಮ್ಮು -ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡಿದ್ದ 370 ನೇ ವಿಧಿಯನ್ನು ರದ್ದು ಮಾಡಲಾಯಿತು' ಎಂದರು.

'ಕಾಶ್ಮೀರದಲ್ಲಿ ಮೊದಲು ಕೆಲವೇ‌ ಕುಟುಂಬಗಳು ಮಾತ್ರ ರಾಜಕೀಯ ಅಧಿಕಾರ ಅನುಭವಿಸುತ್ತಿದ್ದವು. ಬುಡಕಟ್ಟು ಜನರಿಗೆ ಮೀಸಲಾತಿಯೇ ಇರಲಿಲ್ಲ. ಈಗ ಅವರಿಗೆ ಮೀಸಲಾತಿ ಇದೆ. ಅಲ್ಲಿನ ವಾಲ್ಮೀಕಿ ಜನಾಂಗದವರು ಸಫಾಯಿ ಕರ್ಮಚಾರಿ ಕೆಲಸ ಮಾತ್ರ ಮಾಡಬೇಕಿತ್ತು‌. ಈಗ ಅವರು ಸರ್ಕಾರಿ ಹುದ್ದೆ ಪಡೆಯಬಹುದು. ಯಾವುದೇ ಚುನಾವಣೆಗೆ ನಿಲ್ಲಬಹುದು' ಎಂದರು.
'ಬಾಲಕಿಯರ ಮೇಲೆ ಅತ್ಯಾಚಾರ ಮಾಡಿದರೆ, ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದವರಿಗೆ ಶಿಕ್ಷೆ ಕೊಡುವ ಕಾನೂನು ಇರಲಿಲ್ಲ. ಅಲ್ಲದೆ, ಭ್ರಷ್ಟಾಚಾರ ನಿಗ್ರಹ ಕಾನೂನೇ ಇರಲಿಲ್ಲ. ಬ್ಯಾಂಕಿಂಗ್ ವ್ಯವಸ್ಥೆ ಸಂಪೂರ್ಣ ಭ್ರಷ್ಟವಾಗಿತ್ತು. ಈಗ, ಬಹುತೇಕ ಬ್ಯಾಂಕ್ ಅಧಿಕಾರಿಗಳು ಜೈಲಿನಲ್ಲಿ ಇದ್ದಾರೆ, ಇಲ್ಲವೇ ಜಾಮೀನಿನ ಮೇಲಿದ್ದಾರೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.