ADVERTISEMENT

ಹೊಸ ಅಧ್ಯಕ್ಷರ ಆಯ್ಕೆಗೆ ಸಿದ್ಧತೆ ಆರಂಭಿಸಿದ ಬಿಜೆಪಿ: ನಡ್ಡಾ ನಂತರ ಯಾರು?

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 7:25 IST
Last Updated 22 ನವೆಂಬರ್ 2025, 7:25 IST
<div class="paragraphs"><p>ಜೆ.ಪಿ. ನಡ್ಡಾ ಹಾಗೂ ಬಿಜೆಪಿ ಕಾರ್ಯಕರ್ತರು</p></div>

ಜೆ.ಪಿ. ನಡ್ಡಾ ಹಾಗೂ ಬಿಜೆಪಿ ಕಾರ್ಯಕರ್ತರು

   

ಕೃಪೆ: ಪಿಟಿಐ

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿದ ಬೆನ್ನಲ್ಲೇ, ಪಕ್ಷದಲ್ಲಿ ಸಂಘಟನಾತ್ಮಕ ಬದಲಾವಣೆ ತರುವತ್ತ ಬಿಜೆಪಿ ಚಿತ್ತ ಹರಿಸಿದೆ. ಪಕ್ಷದ ಅಧ್ಯಕ್ಷೀಯ ಚುನಾವಣೆಗೆ ಸಿದ್ಧತೆ ಆರಂಭಿಸಿದೆ.

ADVERTISEMENT

ಪಕ್ಷದ ಚುನಾವಣಾ ಉಸ್ತುವಾರಿ ಕೆ.ಲಕ್ಷ್ಮಣ್‌ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಹಿರಿಯ ನಾಯಕರೊಂದಿಗೆ ಬಿಹಾರ ಚುನಾವಣಾ ಫಲಿತಾಂಶದ ದಿನವೇ ಮಾತುಕತೆ ನಡೆಸಿದ್ದಾರೆ. ಇದರೊಂದಿಗೆ, ವಿಳಂಬವಾಗಿದ್ದ ಆಂತರಿಕ ಚುನಾವಣೆ ಕುರಿತ ಪ್ರಕ್ರಿಯೆಗಳು ವೇಗ ಪಡೆದುಕೊಂಡಿವೆ.

ಸದ್ಯ ಸಾಂಸ್ಥಿಕ ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಂಡಿರುವ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣಾ ಸಿದ್ಧತೆ ಪ್ರಗತಿಯಲ್ಲಿದೆ. ಪಕ್ಷದ ಆಂತರಿಕ ಸಂವಿಧಾನದ ಪ್ರಕಾರ, ಚುನಾವಣಾ ಪ್ರಕ್ರಿಯೆಗಳು ಮುಂದುವರಿಯಲು ಕನಿಷ್ಠ 19 ರಾಜ್ಯಗಳಲ್ಲಿ ಚುನಾವಣೆ ಮುಗಿದಿರಬೇಕು. ಸದ್ಯ 29 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣೆಗಳು ಮುಕ್ತಾಯವಾಗಿವೆ. ಹೀಗಾಗಿ, ಅಧ್ಯಕ್ಷರ ಆಯ್ಕೆ ಸರಾಗವಾಗಿ ನಡೆಯಲಿದೆ ಎಂಬುದಾಗಿ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಬಿಜೆಪಿಯ ಮೂಲಗಳು ತಿಳಿಸಿವೆ.

ಆದಾಗ್ಯೂ, ಪಕ್ಷದ ಉನ್ನತ ಹುದ್ದೆಯಲ್ಲಿನ ಬದಲಾವಣೆಯು ಈ ವರ್ಷವೇ ಆಗುವುದು ಅನುಮಾನ. 2026ರ ಆರಂಭದಲ್ಲಿ ಸಾಧ್ಯವಾಗಬಹುದು ಎನ್ನಲಾಗಿದೆ.

ಉತ್ತರ ಪ್ರದೇಶ ಹಾಗೂ ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಅಧ್ಯಕ್ಷರ ಚುನಾವಣೆ ಇನ್ನಷ್ಟೇ ನಡೆಯಬೇಕಿದೆ. ಉತ್ತರ ಪ್ರದೇಶದಲ್ಲಿ ಕೆಲವು ಸಂಘಟನಾತ್ಮಕ ಕೆಲಸಗಳಿಂದಾಗಿ ಚುನಾವಣೆ ವಿಳಂಬವಾಗಿದೆ ಎಂದು ಹೇಳಲಾಗಿದೆ.

'ಉತ್ತರ ಪ್ರದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು ಡಿಸೆಂಬರ್‌ ಮೊದಲ ವಾರದವರೆಗೂ ನಡೆಯಲಿದೆ. ಅದಕ್ಕೆ ಪಕ್ಷವು ಆದ್ಯತೆ ನೀಡಿದೆ' ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಉತ್ತರಾಯಣ ಅವಧಿಯು ಜನವರಿ 15ರಿಂದ ಆರಂಭವಾಗಲಿದ್ದು, ಆ ಸಮಯದಲ್ಲಿ ಹೊಸ ಕೆಲಸಗಳನ್ನು ಪ್ರಾರಂಭಿಸುವ ವಿಚಾರದಲ್ಲಿ ಪಕ್ಷವು ಎಚ್ಚರಿಕೆಯ ನಡೆ ಅನುಸರಿಸುತ್ತದೆ ಎಂಬುದಾಗಿ ಮತ್ತೊಬ್ಬರು ಹೇಳಿದ್ದಾರೆ.

'ಪಕ್ಷದ ಅಧ್ಯಕ್ಷರ ಅವಧಿ ವಿಸ್ತರಣೆಯು ಸರಿಯಾದ ರೀತಿಯಲ್ಲಿ ಆಗಬೇಕು ಎಂಬುದಾಗಿ ನಾಯಕತ್ವ ಬಯಸುತ್ತದೆ ಎನ್ನುವುದು ಈವರೆಗಿನ ಬೆಳವಣಿಗೆಗಳನ್ನು ಗಮನಿಸಿದರೆ ಗೊತ್ತಾಗುತ್ತದೆ' ಎಂದಿದ್ದಾರೆ.

ಸದ್ಯ ಅಧ್ಯಕ್ಷರಾಗಿರುವ ಜೆ.ಪಿ. ನಡ್ಡಾ ಅವರಿಗೆ ಎರಡು ಬಾರಿ ಅವಧಿ ವಿಸ್ತರಣೆ ಮಾಡಲಾಗಿದೆ. ಆದರೂ, ಬಿಜೆಪಿಯ ಮುಂದಿನ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬುದರತ್ತಲೂ ಗಮನಹರಿಸಬೇಕಿದೆ.

ಕಳೆದ ಕೆಲವು ವಾರಗಳಿಂದ ಹಲವು ಹೆಸರುಗಳು ಹರಿದಾಡುತ್ತಿವೆ. ಧರ್ಮೇಂದ್ರ ಪ್ರಧಾನ್‌, ಭೂಪೇಂದ್ರ ಯಾದವ್‌ ಸೇರಿದಂತೆ ಕೆಲವು ಹೆಸರುಗಳ ಸುತ್ತಲೇ ನಿರಂತರವಾಗಿ ಗುಸುಗುಸು ಕೇಳಿಬರುತ್ತಿವೆ. ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಅವರು ಅಮಿತ್ ಶಾ ಅವರಿಗೆ ಆಪ್ತ ಎನ್ನಲಾಗಿದ್ದು, ಅವರ ಹೆಸರೂ ಚಾಲ್ತಿಯಲ್ಲಿದೆ.

ಪಕ್ಷದ ಆಂತರಿಕ ಸಂವಿಧಾನದ ಪ್ರಕಾರ, ಅಧ್ಯಕ್ಷರ ಆಯ್ಕೆಗಾಗಿ ನಡೆಯುವ ಚುನಾವಣೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಮಂಡಳಿಯ ನಾಯಕರು ಮತ್ತು ರಾಜ್ಯ ಘಟಕಗಳ ನಾಯಕರು ಮತ ಚಲಾಯಿಸುವ ಅರ್ಹತೆ ಹೊಂದಿರುತ್ತಾರೆ.

ಕನಿಷ್ಠ 15 ವರ್ಷಗಳಿಂದ ಪಕ್ಷದಲ್ಲಿರುವವರ ಹೆಸರುಗಳನ್ನು ಮಾತ್ರವೇ ಪ್ರಕಟಿಸಬೇಕು ಎಂಬುದನ್ನು ನಿಯಮ ಹೇಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.