ADVERTISEMENT

ರಾಷ್ಟ್ರಪತಿ ಚುನಾವಣೆ: ಒಮ್ಮತದ ಆಯ್ಕೆಗೆ ಬಿಜೆಪಿ ಸಮಾಲೋಚನೆ

ಮಿತ್ರಪಕ್ಷಗಳ ಜತೆಗೆ ಇತರ ಪಕ್ಷಗಳ ಬೆಂಬಲಕ್ಕೆ ಮುಂದಾದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2022, 15:33 IST
Last Updated 12 ಜೂನ್ 2022, 15:33 IST
   

ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮೂರು ದಿನಗಳು ಬಾಕಿ ಉಳಿದಿದ್ದು, ಒಮ್ಮತದ ಅಭ್ಯರ್ಥಿಯ ಆಯ್ಕೆ ನಿಟ್ಟಿನಲ್ಲಿ ವಿರೋಧ ಪಕ್ಷಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಜೊತೆ ಸಮಾಲೋಚನೆಗಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಬಿಜೆಪಿ ನಿಯುಕ್ತಿಗೊಳಿಸಿದೆ.

2017ರ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಯು ಅಭ್ಯರ್ಥಿಯ ಆಯ್ಕೆ ಬಗ್ಗೆ ಸರ್ವಾನುಮತ ರೂಪಿಸಲು ಬಯಸಲಿಲ್ಲ ಎನ್ನುವ ಆರೋಪಕ್ಕೊಳಗಾಗಿತ್ತು. ಹಾಗಾಗಿ, ಆಗ ಪ್ರತಿಪಕ್ಷಗಳೊಂದಿಗೆ ಸ್ಪರ್ಧೆಯನ್ನು ಎದುರಿಸಿತ್ತು. ಆದರೆ, ಈ ಬಾರಿ ಬಿಜೆಪಿಯು ತನ್ನ ನಾಮನಿರ್ದೇಶಿತ ಅಭ್ಯರ್ಥಿಯ ಹೆಸರು ಘೋಷಿಸುವ ಮುನ್ನವೇ ವಿರೋಧ ಪಕ್ಷ ಸೇರಿದಂತೆ ಇತರ ಪಕ್ಷಗಳ ನಾಯಕರ ಭೇಟಿಗೆ ಮುಂದಾಗಿದೆ.

ವೈಎಸ್‌ಆರ್‌ಸಿ ಮತ್ತು ಬಿಜೆಡಿಯಂತಹ ಪಕ್ಷಗಳು ಇನ್ನೂ ತಮ್ಮ ನಿಲುವನ್ನು ಸ್ಪಷ್ಟಪಡಿಸದ ಕಾರಣ ಸಮಾಲೋಚನಾ ಕ್ರಮವು ಮಹತ್ವದ್ದಾಗಿದೆ. ಆದರೆ, ಎನ್‌ಡಿಎಯ ಮಿತ್ರಪಕ್ಷ ಜೆಡಿಯು ಹಿಂದೆ (2012) ತಾನು ಭಾಗವಾಗಿದ್ದ ಮೈತ್ರಿ ಅಭ್ಯರ್ಥಿಯ ವಿರುದ್ಧ ಮತ ಚಲಾಯಿಸಿದ ದಾಖಲೆಯನ್ನು ಹೊಂದಿದೆ.

ADVERTISEMENT

2017ರ ರಾಷ್ಟ್ರಪತಿ ಚುನಾವಣೆಗೆ ಪೂರ್ವಭಾವಿಯಾಗಿ, ರಾಜನಾಥ್ ಸಿಂಗ್ ಮತ್ತು ಆಗಿನ ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಅಭ್ಯರ್ಥಿ ಹೆಸರನ್ನು ಸೂಚಿಸುವಂತೆ ಕೇಳಿದ್ದರು. ಆದರೆ, ಅಂತಿಮವಾಗಿ ಎನ್‌ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್ ಮತ್ತು ಪ್ರತಿಪಕ್ಷದ ಮೀರಾ ಕುಮಾರ್ ಅವರ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಈ ಸಂದರ್ಭದಲ್ಲಿ ಬಿಹಾರದಲ್ಲಿ ಪ್ರತಿಪಕ್ಷಗಳ ಮಹಾಮೈತ್ರಿಕೂಟದ ಪಕ್ಷವಾಗಿದ್ದ ನಿತೀಶ್ ಕುಮಾರ್ ಅವರ ಜೆಡಿಯು, ಕೋವಿಂದ್ ಅವರ ಉಮೇದುವಾರಿಕೆಯನ್ನು ಬೆಂಬಲಿಸಿತ್ತು.

ಈ ಬಾರಿಯೂ ಪ್ರತಿಪಕ್ಷಗಳು ಪ್ರತ್ಯೇಕ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸ್ಪಷ್ಟ ಸೂಚನೆಗಳಿವೆ. ಆದರೆ, ನಿರ್ಣಾಯಕ ಶಾಸನಗಳ ಅಂಗೀಕಾರದ ಸಮಯದಲ್ಲಿ ಸಂಸತ್ತಿನಲ್ಲಿ ತನಗೆ ಸಹಾಯ ಮಾಡಿದ ಬಿಜೆಡಿ ಮತ್ತು ವೈಎಸ್ಆರ್ ಕಾಂಗ್ರೆಸ್‌ನಂಥ ಹಲವು ವಿರೋಧ ಪಕ್ಷಗಳ ಬೆಂಬಲವನ್ನು ಬಿಜೆಪಿ ಪಡೆಯುವ ಸಾಧ್ಯತೆ ಇದೆ.

ಪವಾರ್ ಸ್ಪರ್ಧೆ?

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುವ ಬಗ್ಗೆಯೂ ವಿರೋಧಪಕ್ಷಗಳಲ್ಲಿ ಒಗ್ಗಟ್ಟಿನ ಧ್ವನಿ ಕೇಳಿಬರುತ್ತಿದೆ. ಎಎಪಿ ಸಂಸದ ಸಂಜಯ್ ಸಿಂಗ್ ಅವರು ಚುನಾವಣೆ ಕುರಿತು ಚರ್ಚಿಸಲು ಭಾನುವಾರ ಮುಂಬೈನಲ್ಲಿ ಪವಾರ್ ಅವರನ್ನು ಭೇಟಿಯಾಗಿದ್ದಾರೆ. ಆದರೆ, ಪವಾರ್ ತಮ್ಮ ಸ್ಪರ್ಧೆಯ ಸಾಧ್ಯತೆಯ ಕುರಿತು ತಳ್ಳಿ ಹಾಕಿದ್ದಾರೆ. ಪವಾರ್ ಅವರು 2017ರಲ್ಲಿ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಗಾಗಿ ವಿರೋಧ ಪಕ್ಷಗಳ ಶೋಧನಾ ಸಮಿತಿಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.