ರಾಹುಲ್ ಗಾಂಧಿ
ಪಿಟಿಐ ಚಿತ್ರ
ನವದೆಹಲಿ: ಚೀನಾ ಅತಿಕ್ರಮಿಸಿರುವ ಭೂ ಪ್ರದೇಶವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಹಾಗೂ 'ಮಿತ್ರ' ಅಮೆರಿಕ ವಿಧಿಸಿರುವ ಶೇ 27ರಷ್ಟು ಸುಂಕದ ವಿಚಾರದಲ್ಲಿ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಲೋಕಸಭೆಯಲ್ಲಿ ಗುರುವಾರ ವಾಗ್ದಾಳಿ ನಡೆಸಿರುವ ಅವರು, ಕೇಸರಿ ಪಕ್ಷ (ಬಿಜೆಪಿ) ಹಾಗೂ ಆರ್‌ಎಸ್‌ಎಸ್, ಪ್ರತಿಯೊಬ್ಬ ವಿದೇಶಿಗನ ಎದುರು ತಲೆ ಬಾಗುತ್ತವೆ ಎಂದು ತಿವಿದಿದ್ದಾರೆ.
ಶೂನ್ಯ ವೇಳೆಯಲ್ಲಿ ಮಾತನಾಡಿದ ರಾಹುಲ್, ಭಾರತದ 4,000 ಚದರ ಕಿ.ಮೀ. ಪ್ರದೇಶವನ್ನು ಚೀನಾ ಅತಿಕ್ರಮಿಸಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಹೀಗಿದ್ದರೂ, ವಿದೇಶಾಂಗ ಕಾರ್ಯದರ್ಶಿ ಅವರು ಚೀನಾದ ರಾಯಭಾರಿಯೊಂದಿಗೆ ಕೇಕ್ ಕತ್ತರಿಸಿದ್ದಾರೆ. ಇದು ಆಘಾತಕಾರಿ ಎಂದಿದ್ದಾರೆ.
ಗಾಲ್ವನ್ ಕಣಿವೆಯಲ್ಲಿ ನಡೆದ ಸಂಘರ್ಷದ ವೇಳೆ ಭಾರತದ 20 ಯೋಧರು ಹುತಾತ್ಮರಾದ ವಿಚಾರವನ್ನು ಸ್ಮರಿಸಿದ ಅವರು, ಕೇಂದ್ರ ಸರ್ಕಾರವು ಯೋಧರ ಬಲಿದಾನವನ್ನು ಕೇಕ್ ಕತ್ತರಿಸಿ ಸಂಭ್ರಮಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅವರು, ನಾವು ನೆರೆರಾಷ್ಟ್ರದೊಂದಿಗೆ ಸಹಜ ಸಂಬಂಧ ಕಾಪಾಡಿಕೊಳ್ಳುವುದನ್ನು ವಿರೋಧಿಸುವುದಿಲ್ಲ. ಆದರೆ, ಅದಕ್ಕೂ ಮೊದಲು ಭಾರತವು ಕಳೆದುಕೊಂಡಿರುವ ಭೂ ಭಾಗವನ್ನು ಹಿಂಪಡೆಯಬೇಕು ಎಂದು ಪ್ರತಿಪಾದಿಸಿದ್ದಾರೆ.
'ನಾವು ಕಳೆದುಕೊಂಡಿರುವ ಭೂಮಿಯನ್ನು ಹಿಂಪಡೆಯಲೇಬೇಕು. ಪ್ರಧಾನಿ ಹಾಗೂ ರಾಷ್ಟ್ರಪತಿಯವರು ಚೀನಾಗೆ ಪತ್ರ ಬರೆದಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಇದು ನಮ್ಮವರಿಂದ ತಿಳಿದುಬಂದ ವಿಚಾರವಲ್ಲ. ಬದಲಾಗಿ, ಚೀನಾ ರಾಯಭಾರಿಯೇ ಈ ಬಗ್ಗೆ ಹೇಳಿದ್ದಾರೆ' ಎಂದು ತಿಳಿಸಿದ್ದಾರೆ.
'ವಿದೇಶಾಂಗ ನೀತಿ ಇರುವುದು ಬಾಹ್ಯ ಸಂಬಂಧಗಳ ನಿರ್ವಹಣೆಗಾಗಿ' ಎಂದಿರುವ ಕಾಂಗ್ರೆಸ್ ನಾಯಕ, 'ನೀವು, 4,000 ಚದರ ಕಿ.ಮೀ. ಭೂಮಿಯನ್ನು ಚೀನಾಗೆ ಬಿಟ್ಟುಕೊಟ್ಟಿದ್ದೀರಿ. ಮತ್ತೊಂದೆಡೆ, ನಮ್ಮ 'ಮಿತ್ರ' (ಅಮೆರಿಕ) ಏಕಾಏಕಿ ಶೇ 26ರಷ್ಟು ಸುಂಕ ವಿಧಿಸುವ ನಿರ್ಧಾರ ಮಾಡಿದ್ದಾರೆ. ಇದು, ನಮ್ಮ ಆರ್ಥಿಕತೆಯನ್ನು ಸಂಪೂರ್ಣ ನಾಶ ಮಾಡಲಿದೆ. ನಮ್ಮ ವಾಹನ ಕೈಗಾರಿಕಾ ಕ್ಷೇತ್ರ, ಔಷಧ ತಯಾರಿಕಾ ಕ್ಷೇತ್ರ ಹಾಗೂ ಕೃಷಿ ವಲಯದ ಮೇಲೂ ಪರಿಣಾಮ ಉಂಟಾಗಲಿದೆ' ಎಂದು ಗುಡುಗಿದ್ದಾರೆ.
ವಿದೇಶಾಂಗ ನೀತಿ ವಿಚಾರವಾಗಿ ನೀವು ಎಡ ಇಲ್ಲವೇ ಬಲದ ಪರ ನಿಲುವು ಹೊಂದಿದ್ದೀರಾ ಎಂಬ ಪ್ರಶ್ನೆಯನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಕೇಳಲಾಗಿತ್ತು. ಆಗ ಅವರು, ನಾನು ಎಡಕ್ಕೂ ಇಲ್ಲ, ಬಲಕ್ಕೂ ಇಲ್ಲ. ನೇರವಾಗಿದ್ದೇನೆ ಎಂದು ಉತ್ತರಿಸಿದ್ದರು ಎಂದು ಸ್ಮರಿಸಿದ್ದಾರೆ ರಾಹುಲ್.
'ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿಭಿನ್ನ ತತ್ವಗಳನ್ನು ಹೊಂದಿವೆ. ಎಡ ಅಥವಾ ಬಲದ ಪರವಾದ ನಿಲುವಿನ ಬಗ್ಗೆ ನೀವು ಅವರನ್ನು ಕೇಳಿದರೆ, ಅವರು, ತಾವು ವಿದೇಶಿಗರ ಎದುರು ತಲೆಬಾಗುವುದಾಗಿ ಹೇಳುತ್ತಾರೆ. ಇದು ಅವರ ಸಂಸ್ಕೃತಿ ಮತ್ತು ಇತಿಹಾಸದಲ್ಲೇ ಇದೆ. ಆದಾಗ್ಯೂ, ನಾವು ಕಳೆದುಕೊಂಡಿರುವ ಭೂಮಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಉತ್ತರ ಬಯಸುತ್ತಿದ್ದೇನೆ. ಜೊತೆಗೆ, 'ಮಿತ್ರ' ರಾಷ್ಟ್ರ ನಮ್ಮ ಮೇಲೆ ವಿಧಿಸಿರುವ ತೆರಿಗೆಗೆ ಸಂಬಂಧಿಸಿದಂತೆ ಯಾವ ಕ್ರಮ ಕೈಗೊಳ್ಳಲಿದ್ದೀರಿ?' ಎಂದು ಕೇಳಿದ್ದಾರೆ.
ರಾಹುಲ್ ಅವರ ಪಕ್ಷವೂ, ಈ ವಿಚಾರಗಳ ಸಂಬಂಧ ಹಲವು ಪ್ರಶ್ನೆಗಳನ್ನು ಕೇಂದ್ರದ ಮುಂದಿಟ್ಟಿದೆ.
ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ, ಸೋನಿಯಾ ಗಾಂಧಿ ಅವರೂ ಈ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಚೀನಾದಿಂದ ಗಡಿಯಲ್ಲಿ ಗಂಭೀರವಾದ ಸವಾಲುಗಳು ಎದುರಾಗುತ್ತಿವೆ. ಆದಾಗ್ಯೂ, ಪ್ರಧಾನಿ ಮೋದಿ ಅವರು ಚೀನಾಗೆ ಕ್ಲೀನ್ ಚಿಟ್ ನೀಡಿರುವುದು ಆಘಾತಕಾರಿ ಎಂದು ಕಳವಳ ವ್ಯಕ್ತಪಡಿಸಿರುವ ಸೋನಿಯಾ, ಸಂಸತ್ತಿನ ಉಭಯ ಸದನಗಳಲ್ಲಿ ಈ ಕುರಿತು ಚರ್ಚೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
'ಮೋದಿ ಅವರ ಹೇಳಿಕೆಯು ನಮ್ಮ ಮಾತುಕತೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡಿದೆ. ಆದಾಗ್ಯೂ, ಅದನ್ನು ಸರ್ಕಾರ ಅಲ್ಲಗಳೆದಿದೆ. ಏತನ್ಮಧ್ಯೆ, ಚೀನಾದಿಂದ ಆಮದು ಪ್ರಮಾಣ ಏರಿದ್ದು, ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಮುಖ್ಯ ಪಾತ್ರ ವಹಿಸುತ್ತಿರುವ ನವೋದ್ಯಮಗಳು ನಾಶವಾಗುತ್ತಿವೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.